ಬೆಂಗಳೂರು:
ಇಂದು ಮನೆ ಮನೆ ತೆರಳಿ ಮತಬೇಟೆ ರಾಜ್ಯದಲ್ಲಿ ನಡೆಯಲಿರೋ ಮೊದಲ ಹಂತದ 14 ಕ್ಷೇತ್ರಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ನಿನ್ನೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಸದ್ಯ ಮನೆ ಮನೆ ಪ್ರಚಾರ ಶುರುವಾಗಿದೆ.
ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. 14 ಕ್ಷೇತ್ರಗಳ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.
• 14 ಕ್ಷೇತ್ರಗಳಲ್ಲಿ ಒಟ್ಟು 2,88,19,342 ಮತದಾರರು
• 1,44,28,099 ಪುರುಷ, 1,43,88,176 ಮಹಿಳೆಯರು
• 3,067 ತೃತೀಯ ಲಿಂಗಿಗಳು ಮತದಾರರು
• 30,602 ಮತಗಟ್ಟೆ, 4 ಲಕ್ಷ ಮತಗಟ್ಟೆ ಅಧಿಕಾರಿಗಳು ರೆಡಿ
• 5,000 ಮೈಕ್ರೋ ಅಬ್ಸರ್ವರ್ಗಳ ನೇಮಕ
• 50,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆ
• 65 ಅರೆಸೇನಾ ಪಡೆ ತುಕಡಿ, ಸಶಸ್ತ್ರ ಪೊಲೀಸ್ ಪಡೆ ಕಾವಲು
ನಾಳೆ ಮೊದಲ ಹಂತದ ಲೋಕಸಭೆ ಚುನಾವಣೆ ಹಿನ್ನೆಲೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನದಲ್ಲಿ ಪುರಷರಿಗಿಂತ ಮಹಿಳೆಯರು ಹೆಚ್ಚು ಮತದಾರರಿದ್ದಾರೆ. ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಏಜೆಂಟ್ಗಳು ಕೂರಬಹುದು. ಮಾಧ್ಯಮದಲ್ಲಿ ಯಾವುದೇ ಸರ್ವೆಗೆ ಅವಕಾಶವಿಲ್ಲ ಎಂದಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ಗಳ ವಿತರಣೆ ಆರೋಪ ಸದ್ದು ಮಾಡಿತ್ತು. ಹೀಗಾಗಿ ಕ್ಷೇತ್ರದಲ್ಲಿ ಭದ್ರತೆಗೆ ಪ್ಯಾರಾ ಮಿಲಿಟರಿ ಕರೆಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಏಳು ಪ್ಯಾರಾ ಮಿಲಿಟರಿ ಫೋರ್ಸ್ ಕೊಟ್ಟಿದ್ದು, ಚುನಾವಣಾ ಅಕ್ರಮದ ಮೇಲೆ ಕಣ್ಣಿಟ್ಟಿದೆ.