ಬೆಂಗಳೂರು;
ಪ್ರಸಕ್ತ ವರ್ಷ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲಿಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಉರಿ ಬಿಸಿಲು, ಬಿಸಿ ಗಾಳಿ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈಗಾಲೇ ಆರೋಗ್ಯ ಇಲಾಖೆ ಉರಿ ಬಿಸಿಲಿನಲ್ಲಿ ಪ್ರಯಾಣ, ಕೆಲಸಗಳಿಂದ ದೂರವಿರುವಂತೆ ಸೂಚನೆ ನೀಡಿದೆ.
ಈ ಬೆಳವಣಿಗೆ ನಡುವೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಈ ವರ್ಷದ ಗರಿಷ್ಠ 41.8 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಇದು ಬೆಂಗಳೂರು ಇತಿಹಾಸದಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ.
ಕೆಂಗೇರಿಯಲ್ಲಿ ಮಂಗಳವಾರ ಗರಿಷ್ಠ ತಾಪಮಾನ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ದಿನ ಬೆಂಗಳೂರಿನ ಬಿದರಹಳ್ಳಿಯಲ್ಲಿ 41.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ,
ಬೆಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿರುವ ಸಾಧ್ಯತೆ ಇದೆ. ತಾಪಮಾನ ಏರಿಕೆಯಲ್ಲಿ ಆಯಾ ಸ್ಥಳಗಳಲ್ಲಿ ಸ್ಥಳೀಯ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಿಕ್ಕಮಗಳೂರು (ಬಯಲು ಪ್ರದೇಶ) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೇ 5 ರವರೆಗೆ ಬಿಸಿಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಐಎಂಡಿ ಪ್ರಕಾರ, ಬೆಂಗಳೂರು ಸಿಟಿ ವೀಕ್ಷಣಾಲಯದಲ್ಲಿ ಮಂಗಳವಾರ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ 42.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ನಗರದ ಹೆಚ್ಎಎಲ್ ನಲ್ಲಿ ಮಂಗಳವಾರ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕಲಬುರಗಿಯಲ್ಲಿ ಗರಿಷ್ಠ 42.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 40 ಡಿಗ್ರಿ ಸೆಲ್ಸಿಯಸ್, ಹೆಸರಘಟ್ಟ 40.1 ಡಿಗ್ರಿ ಸೆಲ್ಸಿಯಸ್, ಲಾಲ್ ಬಾಗ್ 40.5 ಡಿಗ್ರಿ ಸೆಲ್ಸಿಯಸ್, ಯಲಹಂಕದಲ್ಲಿ 40.8 ಡಿಗ್ರಿ ಸೆಲ್ಸಿಯಸ್ (ಮಧ್ಯಾಹ್ನ 3.30), ತಾವರೆಕೆರೆ 40.3 ಡಿಗ್ರಿ ಸೆಲ್ಸಿಯಸ್ ಮತ್ತು ಉತ್ತರಹಳ್ಳಿಯಲ್ಲಿ 40.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇವಲ ಬೆಳಗಿನ ಸಮಯದಲ್ಲಿ ಅಷ್ಟೇ ಅಲ್ಲದೆ, ನಗರದಲ್ಲಿ ರಾತ್ರಿ ವೇಳೆಯಲ್ಲೂ ತಾಪಮಾನ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ.