ಸುಲ್ತಾನ್ ಪುರ:
ಎಂಟು ಬಾರಿ ಸಂಸದರಾಗಿರುವ ಉತ್ತರ ಪ್ರದೇಶದ ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ಒಟ್ಟು ರೂ. 97. 17 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಈ ವಿಷಯ ಬಹಿರಂಗವಾಗಿದೆ. ಒಟ್ಟು ಆಸ್ತಿಯಲ್ಲಿ 45.97 ಕೋಟಿ ಚರ ಆಸ್ತಿ ಮತ್ತು 51.20 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮನೇಕಾ ಗಾಂಧಿ ಬ್ಯಾಂಕಿನಲ್ಲಿ 17.83 ಕೋಟಿ ಇತ್ತು, ಅದು 2019 ರಲ್ಲಿ 18.47 ಕೋಟಿ ಆಗಿತ್ತು. ಡಿಬೆಂಚರ್‌ಗಳು, ಷೇರುಗಳು ಮತ್ತು ಬಾಂಡ್‌ಗಳಲ್ಲಿ ನ ಬೆಳವಣಿಗೆಯಿಂದಾಗಿ 24.30 ಕೋಟಿ ಮೌಲ್ಯದ ಆದಾಯ ಗಳಿಸಿರುವುದಾಗಿ ಅವರು ಹೇಳಿದ್ದಾರೆ. 2019 ರಲ್ಲಿ ಅದು 5.55 ಕೋಟಿ ರೂ. ಆಗಿತ್ತು. ಅದೇ ರೀತಿಯಲ್ಲಿ ಅಂಚೆ ಕಚೇರಿ ಉಳಿತಾಯದಲ್ಲಿ 81.01 ಲಕ್ಷ ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ.
2019ರಲ್ಲಿನ ಅಫಿಡವಿಟ್ ಪ್ರಕಾರ ಅವರ ಆದಾಯ 43.32 ಲಕ್ಷ ರೂ. ಆಗಿತ್ತು. 2.82 ಕೋಟಿ ಮೌಲ್ಯದ 3.415 ಕೆಜಿ ಚಿನ್ನ ಮತ್ತು 85 ಕೆಜಿ ಬೆಳ್ಳಿ ಮತ್ತು 40,000 ರೂ ಮೌಲ್ಯದ ರೈಫಲ್ ಹೊಂದಿರುವುದಾಗಿ ಹೇಳಿಕೊಂಡಿದ್ದರು.