ಮೋದಿ ವಿರುದ್ದ ಖರ್ಗೆ ವಾಗ್ದಾಳಿ ….!

ನವದೆಹಲಿ:

    ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಚುನಾವಣೆ ಮುಗಿದ ನಂತರ, “ಸುಳ್ಳು ಮತ್ತು ಕೋಮುವಾದಿ ಭಾಷಣ” ಮಾಡುತ್ತಿದ್ದ ಏಕೈಕ ಪ್ರಧಾನಿ ಎಂದು ಜನ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಗುರುವಾರ ಹೇಳಿದ್ದಾರೆ.

   “ದ್ವೇಷ ಭಾಷಣ”ಗಳನ್ನು ಮಾಡುವ ಬದಲು ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಸರ್ಕಾರದ ಸಾಧನೆಗೆಳ ಆಧಾರದ ಮೇಲೆ ಮತ ಕೇಳುವಂತೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯನ್ನು ಒತ್ತಾಯಿಸಿದರು.

    ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರ ಉಲ್ಲೇಖಿಸಿ ಮರು ಪತ್ರ ಬರೆದಿರುವ ಖರ್ಗೆ, ನಿಮ್ಮ ಪತ್ರದಲ್ಲಿ ಸಾಕಷ್ಟು ಹತಾಶೆ ಮತ್ತು ಚಿಂತೆ ಎದ್ದು ಕಾಣುತ್ತಿದೆ. ನಿಮ್ಮ ಪತ್ರದಲ್ಲಿನ ಭಾಷೆ ಪ್ರಧಾನಿ ಕಚೇರಿಗೆ ಹೊಂದಿಕೆಯಾಗುತ್ತಿಲ್ಲ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಏನೇ ಸುಳ್ಳು ಹೇಳಿದರೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನು ಬರೆದಿದೆ ಮತ್ತು ನಾವು ಏನು ಭರವಸೆ ನೀಡಿದ್ದೇವೆ ಎಂಬುದನ್ನು ಸ್ವತಃ ಮತದಾರರು ಓದಿ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ. ನಮ್ಮ ಖಾತರಿಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ನಾವು ಅವರಿಗೆ ಅದನ್ನು ವಿವರಿಸಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದ ಪ್ರಧಾನಿ ಮೋದಿ, ‘ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಂದ ಮೀಸಲಾತಿ ಕಿತ್ತುಕೊಂಡು ಅವರ ವೋಟ್ ಬ್ಯಾಂಕ್‌(ಮುಸ್ಲಿಮರು)ಗೆ ಬಿಟ್ಟುಕೊಡುವ’ ಕಾಂಗ್ರೆಸ್‌ನ ಉದ್ದೇಶದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಕೇಳಿಕೊಂಡಿದ್ದರು.

    ಈ ಬಗ್ಗೆ ಮೋದಿಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿರುವ ಖರ್ಗೆ, ಮೊದಲ ಹಂತದ ಮತದಾನದ ಬಳಿಕ ನೀವು ಹತಾಶೆಗೊಂಡಂತೆ ಕಾಣುತ್ತಿದೆ. ನಿಮ್ಮ ಭಾಷಣದ ಸುಳ್ಳುಗಳು ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುದಂತಿದೆ. ಅದಕ್ಕಾಗಿ ನಿಮ್ಮ ಸುಳ್ಳುಗಳನ್ನು ಎನ್‌ಡಿಎ ಅಭ್ಯರ್ಥಿಗಳು ಮುಂದುವರಿಸಬೇಕು ಎಂದು ಬಯಸಿ ಪತ್ರ ಬರೆದಂತಿದೆ. ಆದರೆ ಒಂದು ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸತ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

    “ನಮ್ಮ ಗ್ಯಾರಂಟಿಗಳು ಸಹ ತುಂಬಾ ಸರಳ ಮತ್ತು ಸ್ಪಷ್ಟವಾಗಿವೆ. ನಾವು ಅದನ್ನು ಮತದಾರರಿಗೆ ವಿವರಿಸಬೇಕಾಗಿಲ್ಲ. ನಿಮ್ಮ ಅನುಕೂಲಕ್ಕಾಗಿ, ನಾನು ಅವುಗಳನ್ನು ಇಲ್ಲಿ ಪುನರುಚ್ಚರಿಸುತ್ತೇನೆ” ಎಂದಿರುವ ಖರ್ಗೆ, ಕಾಂಗ್ರೆಸ್‌ನ ನಾಲ್ಕು ನ್ಯಾಯ ಯೋಜನೆಗಳು ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರನ್ನು ಸಶಕ್ತಿಗೊಳಿಸಲಿದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ನೀವು ಮತ್ತು ಗೃಹ ಸಚಿವರು ಹೇಳುವುದನ್ನು ಕೇಳಿದ್ದೇವೆ. ಆದರೆ ಕಳೆದ 10 ವರ್ಷಗಳಲ್ಲಿ ನಾವು ನೋಡಿದ ಒಂದೇ ಒಂದು ತುಷ್ಟೀಕರಣ ನೀತಿಯೆಂದರೆ ನೀವು ಮತ್ತು ನಿಮ್ಮ ಮಂತ್ರಿಗಳು ಚೀನಿಯರನ್ನು ಓಲೈಸುವುದು. ಇಂದಿಗೂ ನೀವು ಚೀನಾವನ್ನು ಭಾರತದ ಪ್ರದೇಶ ಅತಿಕ್ರಮಣ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Recent Articles

spot_img

Related Stories

Share via
Copy link