ವಿಜಯಪುರ:
ಭಾರತದ ದಕ್ಷಿಣ ಪ್ರದೇಶಗಳಲ್ಲೂ ಬಿಜೆಪಿನ್ನು ಜನತೆ ಒಪ್ಪುತ್ತಿದ್ದು, ಈ ಪ್ರದೇಶದಲ್ಲಿ ಪಕ್ಷ 110 ರಿಂದ 160 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಬೈಕ್ ರ್ಯಾಲಿ, ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ಮಾತನಾಡಿರುವ ಅಣ್ಣಾಮಲೈ, ಈ ಚುನಾವಣೆಯಲ್ಲಿ ಪಕ್ಷ ಬಹುದೊಡ್ಡ ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ.
ಭಾರತದ ದಕ್ಷಿಣ ಪ್ರಾಂತ್ಯದಲ್ಲಿ ನಾವು ಅತ್ಯುತ್ತಮವಾಗಿ ಸಂಘಟನೆ ಮಾಡುತ್ತಿದ್ದೇವೆ. ತೆಲಂಗಾಣದಲ್ಲಿ ನಾವು ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಲಿದ್ದೇವೆ, ತಮಿಳುನಾಡಿನಲ್ಲಿ ನಾವು 2 ಅಂಕಿಯನ್ನು ದಾಟಲಿದ್ದೇವೆ. ಆಂಧ್ರಪ್ರದೇಶ, ಕೇರಳ, ಪಾಂಡಿಚೆರಿಗಳಲ್ಲೂ ಉತ್ತಮ ಫಲಿತಾಂಶ ಪಡೆಯಲಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ ಕಾಂಗ್ರೆಸ್ ಸರ್ಕಾರ ಪ್ರಜ್ವಲ್ ನ್ನು ವಿದೇಶದಿಂದ ವಾಪಸ್ ಕರೆಸುವುದಕ್ಕೆ ಪಾಲನೆ ಮಾಡಬೇಕಿರುವ ಪ್ರಕ್ರಿಯೆಗಳನ್ನು ಬಿಟ್ಟು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಣ್ಣಾಮಲೈ, ಸಿಎಂ ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯವಿಧಾನದ ಪ್ರಕಾರ, SIT ಅಥವಾ CID ಸಿಬಿಐಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ವಿದೇಶಕ್ಕೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಅಥವಾ ಇಂಟರ್‌ಪೋಲ್ ನೆರವು ಪಡೆಯಲು ರಾಜ್ಯ ಸರ್ಕಾರ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯಬೇಕು. ನಾನು ಕರ್ನಾಟಕದ ಐಪಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಭೂಗತ ಪಾತಕಿ ಬನ್ನಂಜೆ ರಾಜನನ್ನು ಮೊರಾಕೊದಿಂದ ಪ್ರಧಾನಿಗೆ ಯಾವುದೇ ಪತ್ರ ಬರೆಯದೆ ಬಂಧಿಸಲಾಯಿತು” ಎಂದು ಅವರು ಹೇಳಿದರು.
ಎಸ್‌ಐಟಿ ರಚನೆಯ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿರುವುದರಿಂದ ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ ಬೆಂಬಲಿಸುತ್ತಿಲ್ಲ ಎಂದು ಹೇಳಿದರು.
ಈ ವಿಚಾರದಲ್ಲಿ ಏನು ಹೇಳಬೇಕು ಎಂಬುದನ್ನು ನಮ್ಮ ನಾಯಕರು ಈಗಾಗಲೇ ಹೇಳಿದ್ದಾರೆ. ನಾವು ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಅಥವಾ ಯಾವುದೇ ಅಡೆತಡೆಗಳನ್ನು ಹಾಕುತ್ತಿಲ್ಲ. ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ,” ಎಂದ ಅವರು, ಕಾಂಗ್ರೆಸ್ ಸರಕಾರ ಈ ವಿಚಾರದಲ್ಲಿ ಕೇವಲ ರಾಜಕೀಯ ಮಾಡುತ್ತಿದೆಯೇ ಹೊರತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದರೆಡೆಗೆ ಗಂಭೀರವಾಗಿಲ್ಲ ಎಂದು ಪುನರುಚ್ಚರಿಸಿದರು.
ಸಂಸದ ಅಭ್ಯರ್ಥಿ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.