ಮಾಜಿ ಕಮಿಷನರ್‌ ಭಾಸ್ಕರ್‌ ರಾವ್‌ ಕಾರು ಅಪಘಾತ…!

ಬೆಂಗಳೂರು

     ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಏಪ್ರಿಲ್ 23 ರಂದು ಗಂಭೀರವಾದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅವರ ಎಸ್‌ಯುವಿ ಮೂರು ಬಾರಿ ಪಲ್ಟಿ ಹೊಡೆದಿದೆ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

     ಆಮ್ ಆದ್ಮಿ ಪಕ್ಷದ  ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷರೂ ಆಗಿದ್ದ ಬೆಂಗಳೂರಿನ ಮಾಜಿ ಪೋಲೀಸ್ ಅಧಿಕಾರಿ, ಸದ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗಂಭೀರ ಅಪಘಾತದಲ್ಲಿ ಅವರ ಪಕ್ಕೆಲುಬುಗಳು ಮುರಿದಿದ್ದು, ಬೆನ್ನು ಮೂಳೆ ಮತ್ತು ಅಂಗಾಲಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

     ಭಾಸ್ಕರ್ ರಾವ್ ಅವರು  ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್‌ನಲ್ಲಿ ಇತರ ಮೂವರೊಂದಿಗೆ ಆಂಧ್ರಪ್ರದೇಶದ ಅನಂತಪುರ ಮತ್ತು ಕದ್ರಿ ನಡುವೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದಾಗಿ ಕಾರು ಮೂರು ಬಾರಿ ಪಲ್ಟಿ ಹೊಡೆದಿದೆ. ಸಿಟ್ ಬೆಲ್ಟ್ ಮತ್ತು ಕಾರಿನ ಏರ್‌ ಬ್ಯಾಗ್‌ಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರಿನಲ್ಲಿದ್ದ ವೆಂಕಿ ಎನ್ನುವವರು ತೀವ್ರವಾಗಿ ಗಾಯಗೊಂಡು ಐಸಿಯುನಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಭಾಸ್ಕರ್ ರಾವ್ ಅವರು ಗಾಯಗೊಂಡಿದ್ದಾರೆ. ಆದರೆ, ಇತರ ಇಬ್ಬರು ಕಿರಣ ಮತ್ತು ಬಾಬು ಹೆಚ್ಚಾಗಿ ಗಾಯಗೊಂಡಿಲ್ಲ. ಗಾಯಾಳುಗಳನ್ನು ಮೊದಲು ಬತ್ಪಾಲ್ಲಿಯ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರಕ್ಕೆ ಸ್ಥಳಾಂತರಿಸಲಾಯಿತು. ಘಟನೆಯನ್ನು ಗುರುವಾರ ರಾತ್ರಿ ಟ್ವಿಟರ್‌ನಲ್ಲಿ ಬಿಜೆಪಿ ನಾಯಕ ಹಂಚಿಕೊಂಡಿದ್ದಾರೆ. ಜೊತೆಗೆ ಅಪಘಾತದ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

    “ಏಪ್ರಿಲ್ 23 ರಂದು, ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್‌ನಲ್ಲಿ ಅನಂತಪುರ ಮತ್ತು ಕದ್ರಿ  ನಡುವೆ ಚಾಲನೆ ಮಾಡುವಾಗ ನನಗೆ ಗಂಭೀರವಾದ ರಸ್ತೆ ಅಪಘಾತವಾಗಿದೆ. ರಸ್ತೆ ನಿರ್ಮಾಣ ಮತ್ತು ಯಾವುದೇ ಎಚ್ಚರಿಕೆಯಿಲ್ಲದೆ ಲೇನ್‌ಗಳ ಕಾರಣದಿಂದಾಗಿ, ಟಿಪ್ಪರ್‌ಗೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಿ, ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗಿದೆ.

    ಈ ವೇಳೆ ನಮ್ಮ ವಾಹನ ಮೂರು ಬಾರಿ ಪಲ್ಟಿಯಾಗಿದೆ. ನಾವು ನಾಲ್ವರೂ ಬದುಕಿದ್ದೇವೆ. ವೆಂಕಿ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿದ್ದಾರೆ. ನನ್ನ ಪಕ್ಕೆಲುಬುಗಳು ಮತ್ತು ಬೆನ್ನುಮೂಳೆ ಮುರಿತಗಳಾಗಿವೆ. ಕಿರಣ್ ಮತ್ತು ಬಾಬು ಸುರಕ್ಷಿತವಾಗಿದ್ದಾರೆ. ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳು ನಮ್ಮನ್ನು ಉಳಿಸಿದವು” ಎಂದು ಭಾಸ್ಕರ್ ರಾವ್ ಪೋಸ್ಟ್ ಮಾಡಿದ್ದಾರೆ.

    ಇನ್ನು ಸರ್ಕಾರಿ ಆರೋಗ್ಯ ಕೇಂದ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಆಂಧ್ರಪ್ರದೇಶ ಸರ್ಕಾರವನ್ನು ಭಾಸ್ಕರ್ ರಾವ್ ಶ್ಲಾಘಿಸಿದ್ದಾರೆ. “ಕಿರಣ್ ಅಣ್ಣ ಹೊರಬಂದು ನಮ್ಮನ್ನು ಹೊರಗೆಳೆದು ಬಾತ್ಪಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆಂಧ್ರ ಪ್ರದೇಶ ಸರ್ಕಾರದ ರಿಮೋಟ್ ಸರ್ಕಾರಿ ಆರೋಗ್ಯ ಕೇಂದ್ರದ ದಕ್ಷತೆಯನ್ನು ನಾನು ಮೆಚ್ಚಲೇಬೇಕು.

    ಇದು ಮೂವರು ಡಾಕ್ಟರ್, ಇಸಿಜಿ, ಸಾಕಷ್ಟು ಉಪಕರಣಗಳು, ಹವಾನಿಯಂತ್ರಣಗಳು, ವೈದ್ಯಕೀಯ ಸಲಹೆಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ. ಅಲ್ಲಿ ಆಂಬುಲೆನ್ಸ್ ಇತ್ತು ಅದರಲ್ಲಿ ನನ್ನನ್ನು ಅನಂತಪುರಕ್ಕೆ ಸ್ಥಳಾಂತರಿಸಲಾಯಿತು. ಅವರು ನನ್ನ ಹೆಂಡತಿಗೆ ಘಟನೆಯನ್ನು ತಿಳಿಸಿದರು. ಎಲ್ಲೋ ಕೆಲವು ಉತ್ತಮ ನಾಯಕ ಸರ್ಕಾರದಲ್ಲಿ ಕುಳಿತು ಅತ್ಯುತ್ತಮ ಕೆಲಸ ಮಾಡಿದ್ದಾರೆ” ಎಂದು ಭಾಸ್ಕರ್ ರಾವ್ ಬರೆದಿದ್ದಾರೆ.

    ಜೊತೆಗೆ “ನಾನು 40 ವರ್ಷಗಳಿಂದ ವಾಹನ ಚಲಾಯಿಸಿದರೂ ಅಪಘಾತ ಸಂಭವಿಸಿದೆ. ಅತ್ಯುತ್ತಮ ಹೆದ್ದಾರಿಗಳ ಜೊತೆಗೆ, ನಮಗೆ ಸರ್ವಿಸ್‌ ರಸ್ತೆಗಳು ಮತ್ತು ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳ ಅಗತ್ಯವಿದೆ” ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಟಯೋಟಾ ಕಂಪನಿಗೆ ಟ್ಯಾಗ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link