ಬೆಂಗಳೂರು :
ಬೆಂಗಳೂರಿಗೆ ಕೊನೆಗೂ ವರುಣನ ಆಶೀರ್ವಾದ ಸಿಕ್ಕಿದೆ. ಐದು ತಿಂಗಳ ಸತತ ಕಾಯುವಿಕೆ ಬಳಿಕ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನ ಖುಷಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನವೇ ನಗರದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆ ಶುರುವಾಗಿದೆ.
ಗುರುವಾರ ನಗರದಲ್ಲಿ ಹಗುರ ಮಳೆಯಾಗಿತ್ತು, ಮೊದಲೇ ಕಾದಿದ್ದ ಭೂಮಿಗೆ ಎರಡು ಹನಿ ಬಿದ್ದ ಕಾರಣ ಸೆಖೆ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಶುಕ್ರವಾರ ಮತ್ತೆ ನಗರದಲ್ಲಿ ಉತ್ತಮ ಮಳೆ ಯಾಗುತ್ತಿರುವುದು ಹೆಚ್ಚಿನ ತಾಪಮಾನಕ್ಕೆ ಸ್ವಲ್ಪ ಕಡಿವಾಣ ಹಾಕಿದಂತಾಗಿದೆ.
ಕಂಟೋನ್ಮೆಂಟ್, ರಾಜಾಜಿನಗರ, ಮಲ್ಲೇಶ್ವರಂ, ವಸಂತ ನಗರ, ಬಾಣಸವಾಡಿ, ಹೆಚ್ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಹೆಚ್ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ನಾಯಂಡಹಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ.
ಸದಾಶಿವನಗರ, ಶೇಷಾದ್ರಿಪುರ, ಶಿವಾಜಿನಗರ, ಬೆಳ್ಳಂದೂರು, ಸಿವಿ ರಾಮನ್ ನಗರ, ಮಾರತ್ ಹಳ್ಳಿ, ವೈಟ್ಫೀಲ್ಡ್, ಕಲ್ಯಾಣ ನಗರ, ಹೆಬ್ಬಾಳ, ಮತ್ತಿಕೆರೆ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಕೊತ್ತನೂರು, ರಾಜರಾಜೇಶ್ವರಿ ನಗರದಲ್ಲಿ ಕೂಡ ತುಂತುರು ಮಳೆಯಾಗುತ್ತಿದ್ದು, ಬಿರುಸು ಪಡೆಯುವ ಸಾಧ್ಯತೆ ಇದೆ.
ಸಂಜೆ ವೇಳೆಗೆ ನಗರದಲ್ಲಿ ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಇದೆ. ಮೇ 4 ರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
