ನವದೆಹಲಿ:
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತೆ ಹಿನ್ನಡೆಯಾಗಿದ್ದು, ಮೇ 20ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ.
ದೆಹಲಿ ಕೋರ್ಟ್ ನ ದ್ವಿ ಸದಸ್ಯ ನ್ಯಾಯಪೀಠದಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪೀಠ ಮೇ 20ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿತು. ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು, ‘ಇಡಿ ಸಂಗ್ರಹಿಸಿದ ವಿಷಯವು ಅರವಿಂದ್ ಕೇಜ್ರಿವಾಲ್ ಇತರರೊಂದಿಗೆ ಪಿತೂರಿ ನಡೆಸಿರುವುದನ್ನು ಬಹಿರಂಗಪಡಿಸುತ್ತದೆ. ಗೋವಾ ಚುನಾವಣೆಯಲ್ಲಿ ಹವಾಲಾ ಹಣ ಬಳಕೆಯಾಗಿದೆ ಎಂಬುದಕ್ಕೆ ಜಾರಿ ನಿರ್ದೇಶನಾಲಯ ಸಾಕ್ಷ್ಯಾಧಾರಗಳನ್ನು ನೀಡಿದೆ. ಹೀಗಾಗಿ ಕೇಜ್ರಿವಾಲ್ ಬಂಧನ ಕಾನೂನಿಗೆ ವಿರುದ್ಧವಾಗಿಲ್ಲ, ರಿಮಾಂಡ್ ಅನ್ನು ಅಕ್ರಮ ಎಂದು ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
ಇನ್ನು ಅಬಕಾರಿ ನೀತಿ ಹಗರಣದಲ್ಲಿ ಕೆಲ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಅರವಿಂದ್ ಕೇಜ್ರಿವಾಲ್ ರದ್ದಾಗಿದ್ದ ಕಾನೂನಿಗೆ ತಿದ್ದುಪಡಿ ತಂದಿದ್ದರು. ಆ ಮೂಲಕ ಕಿಕ್ ಬ್ಯಾಕ್ ಪಡೆದಿದ್ದರು. ಹೀಗಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದೇ ಕೇಜ್ರಿವಾಲ್ ಈ ಪ್ರಕರಣದ ಕಿಂಗ್ ಪಿನ್ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.