ಹೈದರಾಬಾದ್:
ಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷ ತುಂಬಿದ ನಂತರ ನಿವೃತ್ತಿಯಾಗುವುದಿಲ್ಲ. ಅವರೇ ಮತ್ತೆ ಪ್ರಧಾನಿಯಾಗಿ ದೇಶ ಮುನ್ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ, ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಅವರು 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಪಕ್ಷದ ನಿಯಮದ ಪ್ರಕಾರ 75 ವರ್ಷ ತುಂಬಿದವರು ನಿವೃತ್ತಿಯಾಗಬೇಕು ಅವರೇ 2014 ರಲ್ಲಿ ನಿಯಮ ಮಾಡಿದರು. ಹೀಗಾಗಿ ಮೋದಿ ಪ್ರಧಾನಿಯಾಗಿ ಮುಂದುವರೆಯಲು ಸಾಧ್ಯವಿಲ್ಲ. ಮೋದಿ ಬದಲು ಅಮಿತ್ ಶಾ ಪ್ರಧಾನಿಯಾಗುತ್ತಾರೆ. ಅಮಿತ್ ಶಾ ಪರವಾಗಿ ಮೋದಿ ಮತಯಾಚಿಸುತ್ತಿದ್ದಾರೆ ಎಂದು ಹೇಳಿದ್ದರು.
ಇಂದು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಹಾಗೂ ಇಂಡಿಯಾ ಬ್ಲಾಕ್‌ಗೆ ನಾನು ಹೇಳಲು ಬಯಸುತ್ತೇನೆ, ಅಂತಹ ಯಾವುದೇ (75 ವರ್ಷಗಳ ಮಿತಿ ನಿಯಮ) ಬಿಜೆಪಿಯ ಸಂವಿಧಾನದಲ್ಲಿ ಇಲ್ಲ. ಮೋದಿ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಮತ್ತು ಮುಂದಿನ ಬಾರಿಯೂ ಅವರೇ ಪ್ರಧಾನಿಯಾಗಿ ಮುಂದುವರೆಯುತ್ತಾರೆ. ಈ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಸುಪ್ರೀಂ ಕೋರ್ಟ್ ನ ಮಧ್ಯಂತರ ಜಾಮೀನು ಕ್ಲೀನ್ ಚಿಟ್ ಎಂದು ಕೇಜ್ರಿವಾಲ್ ಭಾವಿಸಿದರೆ, ಅವರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲ ಎಂದರ್ಥ. ಅಬಕಾರಿ ನೀತಿ ಪ್ರಕರಣದಲ್ಲಿ ಅವರು ಆರೋಪಗಳಿಂದ ಮುಕ್ತರಾಗಿಲ್ಲ ಎಂದು ಅಮಿತ್ ಶಾ ತಿರುಗೇಟು ನೀಡಿದ್ದಾರೆ.
”ಚುನಾವಣಾ ಪ್ರಚಾರ ನಡೆಸಲು ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರು ತಮ್ಮ ಬಂಧನ ತಪ್ಪೆಂದು ಸುಪ್ರೀಂ ಕೋರ್ಟ್ ಮುಂದೆ ಪ್ರಾರ್ಥಿಸಿದರು, ಆದರೆ ಸುಪ್ರೀಂ ಕೋರ್ಟ್ ಅದಕ್ಕೆ ಒಪ್ಪಲಿಲ್ಲ. ಅವರಿಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ ಮತ್ತು ಜೂನ್ 2 ರಂದು ಅವರು ತನಿಖಾ ಸಂಸ್ಥೆಯ ಮುಂದೆ ಶರಣಾಗಬೇಕು” ಎಂದು ಅಮಿತ್ ಶಾ ಹೇಳಿದ್ದಾರೆ.