ಬೆಂಗಳೂರು:
ಮುಂಬರುವ ಲೋಕಸಭೆ ಚುನಾವಣೆಯ ನಂತರ INDIA ಮೈತ್ರಿಕೂಟದೊಂದಿಗೆ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ದೇಶದಲ್ಲಿ ಆಡಳಿತ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ಪ್ರತಿಪಾದಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್,”ನನ್ನ ಅಭಿಪ್ರಾಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು INDIAಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಆಡಳಿತ ಮಾಡಲಿದೆ ಎಂಬ ವಿಶ್ವಾಸ ನನ್ನದು ಎಂದರು.
ಜೂನ್ 3 ರಂದು ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ-ಜೆಡಿ (ಎಸ್) ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಎಲ್ಲಾ ಮುಖಂಡರು ಸೇರಿ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ. ಲೋಕಸಭೆ ಚುನಾವಣೆ ಮಾದರಿಯಲ್ಲಿ ಈ ಚುನಾವಣೆ ಎದುರಿಸುತ್ತೇವೆ ಎಂದರು.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದಿದ್ದ ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ ಅವರನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಪಕ್ಷ ಇಂದು ಘೋಷಿಸಿದೆ.