ಉಡುಪಿ:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಆರೋಪಿಯೊಬ್ಬರು ಶನಿವಾರ ಹಿರಿಯಡ್ಕ ಸಮೀಪದ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತನನ್ನು 37 ವರ್ಷದ ಅನೂಪ್ ಶೆಟ್ಟಿ ಎಂದು ಗುರುತಿಸಲಾಗಿದ್ದು, 2021 ರ ಜುಲೈನಲ್ಲಿ ಕುಂದಾಪುರದ ಕಾಳಾವರ ಗ್ರಾಮದಲ್ಲಿ ತನ್ನ ಬ್ಯುಸಿನೆಸ್ ಪಾರ್ಟ್ನರ್ ಅಜೇಂದ್ರ ಶೆಟ್ಟಿ ಎಂಬುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ವಿಚಾರಣೆಗೊಳಪಟ್ಟಿದ್ದರು. ಅಜೇಂದ್ರ ಶೆಟ್ಟಿ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ ಅನುಪ್ ಶೆಟ್ಟಿಯನ್ನು ಕೆಲವು ದಿನಗಳ ನಂತರ ಗೋವಾದಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದರು.
ಅನೂಪ್ ಶೆಟ್ಟಿ ಜೈಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅವರ ಹಠಾತ್ ಸಾವಿನ ಹಿಂದಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಜುಲೈ 30, 2021 ರಂದು ಕುಂದಾಪುರ ತಾಲ್ಲೂಕಿನ ಕಾಳಾವರದಲ್ಲಿರುವ ಅವರ ಕಚೇರಿಯೊಳಗೆ ಫೈನಾನ್ಷಿಯರ್ ಆಗಿದ್ದ ಅಜೇಂದ್ರ ಶೆಟ್ಟಿ ಅವರನ್ನು ಕೊಲೆ ಮಾಡಲಾಗಿತ್ತು. ರಾತ್ರಿ 11 ಗಂಟೆಯಾದರೂ ಅಜೇಂದ್ರ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದಾಗ, ಘಟನೆ ಬೆಳಕಿಗೆ ಬಂದಿತ್ತು. ಕಚೇರಿಗೆ ಧಾವಿಸಿ ನೋಡಿದಾಗ ಅವರು ಅಜೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಬಂದಿತ್ತು.
ಅಜೇಂದ್ರನ ಸಹೋದರ, ದೂರುದಾರ ಮಹೇಂದ್ರ ಶೆಟ್ಟಿ, ಸಂತ್ರಸ್ತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಈ ಕೊಲೆ ಹಿಂದೆ ಅನೂಪ್ ಶೆಟ್ಟಿಯ ಕೈವಾಡವಿದೆ ಎಂದು ಶಂಕಿಸಿದ್ದರು. ಕೆಲವು ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನೂಪ್ ಶೆಟ್ಟಿ ಅಜೇಂದ್ರನೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಮತ್ತು ಹಲವಾರು ಬಾರಿ ಅಜೇಂದ್ರನ ಮುಂದೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು.
ಅನೂಪ್ ಶೆಟ್ಟಿ ಶನಿವಾರ ಉಡುಪಿ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಹಿರಿಯಡ್ಕ ಠಾಣೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 176ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೈಲರ್ ಎಸ್‌ಎ ಶಿರೋಳ್ ಅವರು ದೂರು ದಾಖಲಿಸಿದ್ದು, ಕುಂದಾಪುರ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ 2021ರ ಆಗಸ್ಟ್ 6ರಂದು ಶೆಟ್ಟಿಯನ್ನು ಜೈಲಿನಲ್ಲಿ ಇರಿಸಲಾಗಿತ್ತು. ಮೇ 11 ರಂದು ಮಧ್ಯಾಹ್ನ 2.45 ಕ್ಕೆ ಅನೂಪ್ ಪ್ರಜ್ಞೆ ತಪ್ಪಿದ್ದರು. ನಾಗರಾಜ್ ಕುಮಾಶಿ ಎಂಬ ಸಿಬ್ಬಂದಿ ಈ ವಿಚಾರವನ್ನು ಜೈಲರ್ ಗಮನಕ್ಕೆ ತಂದಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.