ನವದೆಹಲಿ:
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ INDIA ಬ್ಲಾಕ್ ಅಧಿಕಾರಕ್ಕೆ ಬಂದರೆ ಜೂನ್ 5 ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾಗುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಜೂನ್ 2 ರಂದು ಅವರು ಶರಣಾಗಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಏಳು ಹಂತದ ಚುನಾವಣೆಗೆ ಜೂನ್ 1 ಕೊನೆಯ ದಿನವಾಗಿದೆ ಮತ್ತು ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ತಿಹಾರ್‌ನಲ್ಲಿ ನ್ಯಾಯಾಂಗ ಬಂಧನದ ಸಮಯದಲ್ಲಿ ನನ್ನನ್ನು ಅವಮಾನಿಸಿದರು, ಆರೋಪಗಳನ್ನು ಮಾಡಿ ನನ್ನ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.
ತಿಹಾರ್ ಜೈಲಿನಲ್ಲಿರುವ ನನ್ನ ಸೆಲ್‌ನಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳಿದ್ದವು. 13 ಅಧಿಕಾರಿಗಳು ಸಿಸಿಟಿವಿ ಮೇಲ್ವಿಚಾರಣೆ ಮಾಡಿದರು. ಸಿಸಿಟಿವಿ ಫೀಡ್ ಅನ್ನು ಪಿಎಂಒಗೆ ರವಾನಿಸಲಾಗಿದೆ ಎಂದು ಹೇಳಲಾಗಿದೆ. ಮೋದಿ ಜಿ ನನ್ನ ಮೇಲೆ ನಿಗಾ ಇಡುತ್ತಿದ್ದರು. ಮೋದಿ ಅವರಿಗೆ ನನ್ನ ಮೇಲೆ ಏನು ದ್ವೇಷವಿದೆ ಎಂದು ನನಗೆ ತಿಳಿದಿಲ್ಲ. ಎಎಪಿ ನಾಯಕರನ್ನು ಜನರು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ ನಾವು ಮಾಡಿದ ಕೆಲಸದಿಂದಾಗಿ ಬಿಜೆಪಿಗೆ ಭಯವಿದೆ ಎಂದು ಕೇಜ್ರಿವಾಲ್ ಹೇಳಿದರು.
ಜೂನ್ 2 ರಂದು ಮತ್ತೆ ಜೈಲಿಗೆ ಹೋಗಬೇಕಾಗಿದೆ. ಜೂನ್ 4 ರಂದು ಜೈಲಿನೊಳಗೆ ಚುನಾವಣಾ ಫಲಿತಾಂಶ ನೋಡುತ್ತೇನೆ. ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದರೆ, ನಾನು ಜೂನ್ 5 ರಂದು ಜೈಲಿನಿಂದ ಹಿಂತಿರುಗುತ್ತೇನೆ ಎಂದು ಕೇಜ್ರಿವಾಲ್ ಪಕ್ಷದ ಕೌನ್ಸಿಲರ್‌ಗಳಿಗೆ ತಿಳಿಸಿದ್ದಾರೆ. ಭಾನುವಾರ, ಅವರು ಪಕ್ಷದ ಶಾಸಕರನ್ನು ಭೇಟಿ ಮಾಡಿದರು ಮತ್ತು ಬಂಧನದ ನಂತರ ಬಿಜೆಪಿ ಪ್ರಯತ್ನಗಳ ಹೊರತಾಗಿಯೂ ಒಗ್ಗಟ್ಟು ಒಡೆಯಲಿಲ್ಲ ಎಂದು ಶ್ಲಾಘಿಸಿದರು. ಕೇಜ್ರಿವಾಲ್ ಅವರ ಬಂಧನದ ನಂತರ ಎಎಪಿ “ಒಡೆಯುವ ಬದಲು ಹೆಚ್ಚು ಒಗ್ಗೂಡಿದೆ” ಎಂದು ತಿಳಿಸಿದ್ದಾರೆ.