ಬೆಂಗಳೂರು:
ಏನೂ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಹಾಕಿದ್ದಾರೆ ಎಂಬ ನೋವಿನಲ್ಲಿ ರೇವಣ್ಣ ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದರು ಎಂದು ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಅವರನ್ನು ಬೇಟಿಯಾದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಜಿ ಟಿ ದೇವೇಗೌಡ ಇಂದು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಜಿ.ಟಿ.ದೇವೇಗೌಡ ಮುಂದೆ ರೇವಣ್ಣ ಕಣ್ಣೀರು ಹಾಕಿದ್ದಾರಂತೆ.
ರೇವಣ್ಣ ಜೈಲಿಗೆ ಹೋದ ದಿನದಿಂದ ಬಂದಿರಲಿಲ್ಲ. ಅವರ ಆರೋಗ್ಯ ವಿಚಾರಿಸಲು ಬರಬೇಕೆಂದು ಮೂರು ದಿನದಿಂದ ಮನಸ್ಸಲ್ಲಿತ್ತು. ಭಾನುವಾರ ರಜೆ, ಬಿಡೋದಿಲ್ಲ ಅಂತಾ ಹೇಳಿದ್ರು. ಅದಕ್ಕೆ ಇಂದು ಮಾತನಾಡಲು ಬಂದಿದ್ದೇನೆ ಎಂದರು.
ಅವರು ಆರಾಮವಾಗಿ ಕುಳಿತಿದ್ದು, ಜೊತೆಯಲ್ಲಿ ಚಹಾ ಕುಡಿದೆವು. ಹಳೆ ವಿಚಾರಗಳನ್ನೆಲ್ಲ ಮೆಲುಕು ಹಾಕಿದ್ರು. ಅವ್ರಿಗೆ ಈಗಲೂ ಕೂಡ ಹಾಸನ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅವ್ರಿಗೆ ಒಂದೇ ಯೋಚನೆ, ನಾನೇನೂ ತಪ್ಪು ಮಾಡಿದ್ದೀನಿ ಎಂದು. ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷವಾಗಿದೆ. ನನ್ನನ್ನ ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ಲಿ ಅನುಭವಿಸಬಹುದಿತ್ತು. ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲಾ ಎಂಬ ಕೊರಗು ರೇವಣ್ಣನಿಗೆ ಕಾಡುತ್ತಿದೆ. ಅದನ್ನು ನೆನಸಿಕೊಂಡಾಗ ದುಃಖಪಡುತ್ತಿದ್ದಾರೆ.
ಅರಕಲಗೂಡು ಶಾಸಕ ಎ ಮಂಜುಗೆ ಸುತ್ತಿಕೊಂಡ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲವೂ ಕೂಡ ತನಿಖೆ ಮೂಲಕ ಎಸ್ಐಟಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ಸಿಎಂ ಹೇಳಿದ್ದಾರೆ, ನಮಗೂ ಕೂಡ ನಂಬಿಕೆ ಬಂದಿದೆ. ಪೆನ್ ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದಾರೆ. ಎಲ್ಲರದೂ ಹೊರಗಡೆ ಬರುತ್ತೆ ಸ್ವಲ್ಪ ದಿನ ಕಾಯಬೇಕು ಎಂದು ಪರಪ್ಪನ ಅಗ್ರಹಾದ ಬಳಿ ಜಿ.ಡಿ.ದೇವೇಗೌಡ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ವಿಚಾರವಾಗಿ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದರು.