ಬೆಂಗಳೂರು:
ಮುಂಬರುವ ಪರಿಷತ್ ಚುನಾವಣೆಗಾಗಿ ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂದ ಇಬ್ಬರು ಮತ್ತು ಜೆಡಿಎಸ್‌ನಿಂದ ಒಬ್ಬರು ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದಲ್ಲದೆ ಐವರು ಸ್ವತಂತ್ರರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಜೂನ್ 3 ರಂದು ಮತದಾನ ನಡೆಯಲಿದೆ.
ಕಾಂಗ್ರೆಸ್‌ನಲ್ಲಿ ರಾಮೋಜಿಗೌಡ ಅವರು ಬೆಂಗಳೂರು ಪದವೀಧರ ಕ್ಷೇತ್ರದಿಂದ ಮತ್ತು ಡಿಟಿ ಶ್ರೀನಿವಾಸ್ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಹಾಗೂ ಮಧು ಬಂಗಾರಪ್ಪ ಉಪಸ್ಥಿತರಿದ್ದರು. ಬೆಂಗಳೂರು ಪದವೀಧರ ಕ್ಷೇತ್ರವು ರಾಜ್ಯ ರಾಜಧಾನಿಯನ್ನು ಪ್ರತಿನಿಧಿಸುವುದರಿಂದ ಪ್ರಮುಖ ಪಾತ್ರ ವಹಿಸಲಿದೆ, ಹೀಗಾಗಿ ಈ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಚುನಾವಣೆಯ ದಿನಾಂಕಕ್ಕೆ ಆರು ತಿಂಗಳ ಮೊದಲು ನಾವು ನಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದೇವೆ ಮತ್ತು ನಮ್ಮ ಅಭ್ಯರ್ಥಿಗಳಿಗೆ ಮತದಾರರನ್ನು ಭೇಟಿ ಮಾಡಲು ಮತ್ತು ಪ್ರಚಾರ ಮಾಡಲು ಸಮಯವಿದೆ. ಎಲ್ಲ ಆರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವೈ.ಎ.ನಾರಾಯಣಸ್ವಾಮಿ, ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ.ದೇವೇಗೌಡ, ನೈಋತ್ಯ ಪದವೀಧರ ಕ್ಷೇತ್ರದಿಂದ ಧನಂಜಯ ಸರ್ಜಿ ಸೇರಿದಂತೆ ಬಿಜೆಪಿಯಿಂದ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಇವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಇದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಎಲ್ ಭೋಜೇಗೌಡ ನಾಮಪತ್ರ ಸಲ್ಲಿಸಿದ್ದಾರೆ.