ನವದೆಹಲಿ:
ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿರುವ ಬದ್ಧತೆಗಳು ಚುನಾವಣಾ ಕಾನೂನಿನಡಿಯಲ್ಲಿ ‘ಭ್ರಷ್ಟಾಚಾರ’ವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠವು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿನ ಬದ್ಧತೆಗಳು ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಆರ್ಥಿಕ ಸಹಾಯವಾಗಿದ್ದು, ಇದು ಚುನಾವಣಾ ಅಭ್ಯಾಸವನ್ನು ಭ್ರಷ್ಟಗೊಳಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ರಾಜಕೀಯ ಪಕ್ಷವು ತನ್ನ ಪ್ರಣಾಳಿಕೆಯಲ್ಲಿನ ಬದ್ಧತೆಗಳು, ಸಾರ್ವಜನಿಕರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ಸಹಾಯಕ್ಕೆ ಕಾರಣವಾಗುತ್ತವೆ, ಆ ಪಕ್ಷದ ಅಭ್ಯರ್ಥಿಯ ಭ್ರಷ್ಟ ಆಚರಣೆಗೆ ಕಾರಣವಾಗುತ್ತದೆ ಎಂಬ ಹಿರಿಯ ವಕೀಲರ ವಾದವು ವಾಸ್ತವಕ್ಕೆ ದೂರವಾಗಿದ್ದು ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಶಶಾಂಕ ಜೆ ಶ್ರೀಧರ ಅವರು ವಿಜೇತ ಅಭ್ಯರ್ಥಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳು ಭ್ರಷ್ಟಾಚಾರಕ್ಕೆ ಸಮವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.
ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 ರ ಅಡಿಯಲ್ಲಿ ಅವರು ಜಾರಿಗೆ ತರಲು ಯೋಜಿಸಿರುವ ನೀತಿಗಳ ಬಗ್ಗೆ ಪಕ್ಷದ ಘೋಷಣೆಯನ್ನು ಭ್ರಷ್ಟ ನಡವಳಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಕಾಂಗ್ರೆಸ್ ನ ಐದು ಭರವಸೆಗಳನ್ನು ಸಮಾಜ ಕಲ್ಯಾಣ ನೀತಿಗಳೆಂದು ಪರಿಗಣಿಸಬೇಕು. ಅವು ಆರ್ಥಿಕವಾಗಿ ಸಮರ್ಥವಾಗಿವೆಯೇ ಅಥವಾ ಇಲ್ಲವೇ ಎಂಬುದು ಸಂಪೂರ್ಣವಾಗಿ ವಿಭಿನ್ನ ಅಂಶವಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.