ಮುಂಬೈ:
ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ನಡುವಲ್ಲೇ ಎಲ್ಪಿಜಿ ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ಬಾರಿಗೆ ಇಳಿಸಿವೆ. ಈ ಮೂಲಕ ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ಮೂರು ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 69.50 ರೂ. ಕಡಿತಗೊಳಿಸಿವೆ.
ಇದರೊಂದಿಗೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆ 1,676 ರಷ್ಟಿದೆ. ದೇಶಾದ್ಯಂತ ಮೆಟ್ರೋ ನಗರಗಳಿಗೂ ಇದು ಅನ್ವಯವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಬೆಲೆ ಇಳಿಕೆಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಪೂರೈಕೆ-ಬೇಡಿಕೆ ಯಂತಹ ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಬೆಲೆ ಪರಿಷ್ಕರಿಸಲಾಗುತ್ತದೆ.