ನವದೆಹಲಿ:
ತ್ರಿಪುರಾದಲ್ಲಿ ಮಹಿಳೆಯೊಬ್ಬರು ತನ್ನ ಒಂಬತ್ತು ವರ್ಷದ ಮಗನ ದುರ್ವರ್ತನೆಯಿಂದ ಹತಾಶೆಗೊಂಡು ಆತನನ್ನು ನಿಭಾಯಿಸಲು ಸಾಧ್ಯವಾಗದೆ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸೋಮವಾರ ಸಂಜೆ ಅಗರ್ತಲಾದ ಜೋಯ್ನಗರದಲ್ಲಿ ಈ ದುರಂತ ಬೆಳಕಿಗೆ ಬಂದಿದೆ.
ಮಹಿಳೆ ಸುಪ್ರಭಾ ಬಾಲ್ ಎಂಬುವವರು ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಸ್ಥಳಕ್ಕೆ ಬಂದಾಗ ಮಗನ ಶವದ ಬಳಿಯೇ ಕುಳಿತಿರುವುದು ಕಂಡುಬಂದಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಸುಪ್ರಭಾ ಬಾಲ್ ಮಾತನಾಡಿ, ತನ್ನ ಪತಿ ಕಾಣೆಯಾಗಿದ್ದು, ತನ್ನ ಮಗಳಿಗೆ ಮದುವೆಯಾಗಿದೆ. ಹೀಗಾಗಿ, ತಾಯಿ ಮಗ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ತನ್ನ ಮಗ ರಾಜ್ದೀಪ್ನ ನಿರಂತರ ಅನುಚಿತ ವರ್ತನೆಯಿಂದ ಬೇಸತ್ತುಹೋಗಿದ್ದು ಮತ್ತು ಆತ ಹಣ ಕದ್ದು ಆತನ ವಿದ್ಯಾಭ್ಯಾಸವನ್ನು ನಿರ್ಲಕ್ಷ್ಯಿಸುತ್ತಿದ್ದನು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.
ಆತನ ಕೃತ್ಯಗಳಿಂದ ನಾನು ಕೆಲಸಕ್ಕೆ ಹೋಗಲು ಅಥವಾ ಶಾಂತಿಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ನಾನು ಅವನನ್ನು ಕೊಂದಿದ್ದೇನೆ ಮತ್ತು ಅದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದಿದ್ದಾರೆ.
ಆಕೆಯ ಮನೆಯಿಂದ ಕೊಲೆಗೆ ಬಳಸಲಾಗಿದೆ ಎನ್ನಲಾದ ಹಗ್ಗ ಮತ್ತು ಬಿದಿರಿನ ಕೋಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.