ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಸಶಸ್ತ್ರ ಪಡೆಗಳ ಸಂಪೂರ್ಣಸಾಮರ್ಥ್ಯವನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾರತೀಯ ಸೇನೆಯ ಅಧಿಕಾರಿಗಳು ಸೂಚಿಸಿದ್ದಾರೆ.
ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರ ದಾಳಿ ಸೇರಿದಂತೆ ಕಣಿವೆಯಲ್ಲಿ ಸರಣಿ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ಎಸ್ಎ) ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪ್ರಧಾನಿಗೆ ನೀಡಲಾಯಿತು. ಭಯೋತ್ಪಾದನೆ ನಿಗ್ರಹ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆಯೂ ಪ್ರಧಾನಿ ಮೋದಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ಭಾರತದ ಸಶಸ್ತ್ರ ಪಡೆಗಳ ಸಂಪೂರ್ಣ ಸಾಮರ್ಥ್ಯವನ್ನು ಭಯೋತ್ಪಾದನಾ ನಿಗ್ರಹಕ್ಕೆ ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರಧಾನಿ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಭದ್ರತಾ ಪಡೆಗಳ ನಿಯೋಜನೆ ಹಾಗೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೂ ಮಾತನಾಡಿದ್ದು, ಸ್ಥಳೀಯ ಆಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಅವರು, ವಿದೇಶಿ ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಏಜೆಂಟರಿಗೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದರು.