ಆಂಧ್ರ ಪ್ರದೇಶ: ನೂತನ ಡಿಸಿಎಂಗೆ ಭಾರಿ ಭದ್ರತೆ …..!

ಅಮರಾವತಿ

   ಆಂಧ್ರ ಪ್ರದೇಶದ ನೂತನ ಸರ್ಕಾರ ಪವನ್ ಕಲ್ಯಾಣ್‌ಗೆ ಹೆಚ್ಚುವರಿ ಭದ್ರತೆ ನೀಡಿದೆ. ಜನಸೇನಾ ಪಕ್ಷದ ಮುಖಸ್ಥ, ನಟ ಪವನ್ ಕಲ್ಯಾಣ್ ಸದ್ಯ ಆಂಧ್ರ ಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿ, 4 ಖಾತೆಗಳು ಅವರ ಬಳಿ ಇದೆ.

    ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟವನ್ನು ಸೇರಿದ್ದಾರೆ. ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿ ಮಾಡಲಾಗಿದೆ. ರಾಜ್ಯ ಸರ್ಕಾರ ಮಂಗಳವಾರ ಡಿಸಿಎಂಗೆ ಭದ್ರತೆ ನೀಡಿ ಆದೇಶ ಹೊರಡಿಸಿದೆ.

     ಕಳೆದ ಬುಧವಾರ ವಿಜಯವಾಡದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

     55 ವರ್ಷದ ಪವನ್ ಕಲ್ಯಾಣ್‌ಗೆ ವೈ-ಪ್ಲಸ್ ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಬುಲೆಟ್ ಪ್ರೂಫ್ ಕಾರನ್ನು ಸರ್ಕಾರ ನೀಡಿದೆ. ವಿಜಯವಾಡದಲ್ಲಿ ಉಪ ಮುಖ್ಯಮಂತ್ರಿಗಳ ಕಛೇರಿಗೆ ಪವನ್ ಕಲ್ಯಾಣ್ ಮಂಗಳವಾರ ಮೊದಲ ಬಾರಿಗೆ ಆಗಮಿಸಿದ್ದಾರೆ.

    ವೈ-ಪ್ಲಸ್ ಶ್ರೇಣಿಯ ಭದ್ರತೆ ಎಂದರೆ 11 ಸಿಬ್ಬಂದಿಗಳು ಪವನ್ ಕಲ್ಯಾಣ್ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಇವರಲ್ಲಿ 2-4 ಸಿಆರ್‌ಪಿಎಫ್ ಅಥವ ಸಿಐಎಸ್‌ಎಫ್ ಕಮಾಂಡೋಗಳು ಇರಲಿದ್ದು, ಉಳಿದ ಸಿಬ್ಬಂದಿ ರಾಜ್ಯದ ಪೊಲೀಸರು.

   ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟದ ಎಲ್ಲಾ 24 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿದ್ದು, ಅವರಿಗೆ ಪಂಚಾಯತ್ ರಾಜ್. ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು. ಪರಿಸರ ಮತ್ತು ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ನೀಡಲಾಗಿದೆ.

   ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2024ರಲ್ಲಿ ಟಿಡಿಪಿ 135, ಜನಸೇನಾ ಪಕ್ಷ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಜನಸೇನಾ ಪಕ್ಷ ಸ್ಪರ್ಧೆ ಮಾಡಿದ್ದ ಎಲ್ಲಾ 21 ಕ್ಷೇತ್ರಗಳಲ್ಲಿಯೂ ಗೆದ್ದಿದ್ದು, ಪವನ್ ಕಲ್ಯಾಣ್ ಹೊಸ ದಾಖಲೆ ಬರೆದಿದ್ದಾರೆ.

   ಟಿಡಿಪಿ ಮತ್ತು ಜನಸೇನಾ ಪಕ್ಷ ರಾಜ್ಯದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಇವರು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಜನಸೇನಾ ಪಕ್ಷದ ಮೂವರು ಸಚಿವರಿದ್ದಾರೆ. ಬಿಜೆಪಿಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ.

   ಆಂಧ್ರ ಪ್ರದೇಶ ವಿಧಾನಸಭೆಯ ಕಛೇರಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಛೇರಿಯ ಪಕ್ಕದಲ್ಲಿಯೇ ಪವನ್‌ ಕಲ್ಯಾಣ್‌ಗೆ ಕಛೇರಿ ಹಂಚಿಕೆ ಮಾಡಲಾಗಿದೆ. ವೈ-ಪ್ಲಸ್ ಭದ್ರತೆಯ ಜೊತೆಗೆ ಬುಲೆಟ್ ಪ್ರೂಫ್ ಕಾರನ್ನು ಅವರಿಗೆ ನೀಡಲಾಗಿದೆ.

    ರಾಜ್ಯದ ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಪವನ್ ಕಲ್ಯಾಣ್‌ ಭದ್ರತೆ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈಗ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಸರ್ಕಾರದ ಭಾಗವಾಗಿದ್ದು, ಹೆಚ್ಚುವರಿ ಭದ್ರತೆಯನ್ನು ಪಡೆದಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. 1,34,394 ಮತಗಳನ್ನು ಪಡೆದು ಅವರು ವೈಎಸ್ಆರ್‌ಸಿಪಿಯ ಗೀತಾ ವಿಶ್ವನಾಥ್ (64115 ಮತ) ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟ ಸೇರಿ ಉಪ ಮುಖ್ಯಮಂತ್ರಿಯೂ ಆಗಿದ್ದಾರೆ.

    ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2024ರ ಜೊತೆ ಲೋಕಸಭೆ ಚುನಾವಣೆಗೂ ಮತದಾನ ನಡೆದಿತ್ತು. 25 ಕ್ಷೇತ್ರಗಳ ಪೈಕಿ ಚುನಾವಣೆಯಲ್ಲಿ ಟಿಡಿಪಿ ಪಕ್ಷ 16 ಕ್ಷೇತ್ರಗಳಲ್ಲಿ, ಜನಸೇನಾ ಪಕ್ಷ 2 ಸ್ಥಾನಗಳಲ್ಲಿ ಜಯಗಳಿಸಿವೆ.

    ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಯಲ್ಲಿ ಜನಸೇನಾ, ಟಿಡಿಪಿ ಪ್ರಮುಖ ಪಕ್ಷವಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಪ್ತರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap