ಬೆಳಗಾವಿ:
ರಾಜ್ಯದಲ್ಲಿ ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಬೆಳಗಾವಿ ನಗರ ಬ್ಲಾಕ್ ಧರ್ಮವೀರ ಸಂಭಾಜಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು. ಬೆಳಗಾವಿ ಬಿಜೆಪಿ ಸಂಸದ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಖಂಡಿಸಿದರು.
ಖಾತರಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಇದಕ್ಕಾಗಿ ಹಣ ಸಂಗ್ರಹಿಸಲು, ರಾಜ್ಯದಲ್ಲಿ ಇಂಧನ ಬೆಲೆಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಬಡವರ ಜೇಬಿಗೆ ಕತ್ತರಿ ಹಾಕಲು ಪ್ರಾರಂಭಿಸಿದೆ.
ಕಾರವಾರದ ನಿವಾಸಿಗಳು ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಪಡೆಯಲು ಗೋವಾಕ್ಕೆ ಅಲೆಯಬೇಕಾಯಿತು. ಹೆಚ್ಚುತ್ತಿರುವ ಇಂಧನ ಬೆಲೆಯು ಇತರ ಅಗತ್ಯ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಪಕ್ಕದ ರಾಜ್ಯದ ಗೋವಾದಲ್ಲಿ ಬಿಜೆಪಿಯೇ ಆಧಿಕಾರದಲ್ಲಿದೆ. ಅಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಲ್ಲಿಗಿಂತ 9 ರೂ. ಕಡಿಮೆಯಿದೆ. ಇದಕ್ಕೆ ಸಿದ್ದರಾಮಯ್ಯ ಬಳಿ ಉತ್ತರವಿದೆಯಾ. ಇದೆ ರೀತಿ ಮಾಡಿದ್ರೆ ಜನ ದಂಗೆ ಏಳುವ ಸ್ಥಿತಿ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸರಕಾರ ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲಿದೆ ಎಂದು ಶೆಟ್ಟರ್ ಎಚ್ಚರಿಸಿದರು.