ಹೈದರಾಬಾದ್:
ಕಾಂಗ್ರೆಸ್ ಶಾಸಕನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್ನಗರ ಜಿಲ್ಲೆಯ ಚೊಪ್ಪದಂಡಿಯ ಹೊರವಲಯದಲ್ಲಿರುವ ಕೊಂಪಲ್ಲಿಯಲ್ಲಿ ನಡೆದಿದೆ. ಕಾಂಗ್ರೆಸ್ ಶಾಸಕರ ಪತ್ನಿ ಸಾವಿನ ಸುತ್ತ ಅನುಮಾನ ವ್ಯಕ್ತವಾಗುತ್ತಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದೆ.
ಚೊಪ್ಪದಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾದೇವಿ ಮೃತರು ಎಂದು ತಿಳಿದು ಬಂದಿದೆ. ಅಲ್ವಾಲ್ ಪಂಚಶೀಲಾ ಕಾಲೋನಿಯ ಮನೆಯೊಂದರಲ್ಲಿ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
12 ವರ್ಷಗಳ ಹಿಂದೆ ಮೇಡಿಪಲ್ಲಿ ಸತ್ಯಂ ರೂಪಾದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಪತ್ನಿ ರೂಪಾದೇವಿ ಜೊತೆ ವೈಮನಸ್ಯ ಇರುವ ಶಂಕೆ ವ್ಯಕ್ತವಾಗಿದೆ. ರೂಪಾದೇವಿ ಮೇಡ್ಚಲ್ ಮುನಿರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ದಂಪತಿಗೆ ಯೋಜಿತ್ (11) ಮತ್ತು ಮಗಳು ರಿಷಿಕಾ ಶ್ರೀ (9) ಮಕ್ಕಳಿದ್ದಾರೆ.
ರೂಪಾದೇವಿ ವೀಡಿಯೋ ಕಾಲ್ ಮಾಡಿ ಶಾಸಕ ಸತ್ಯಂಗೆ ತಾನು ಸಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕೂಡಲೇ ಪತ್ನಿ ವಾಸಿಸುತ್ತಿದ್ದ ಮನೆ ಬಳಿ ಹೊರಟುಬಂದಿದ್ದಾರೆ. ಆದರೆ ಮನೆ ತಲುಪಿದಾಗ ರೂಪಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ಮನೆ ಸಮೀಪದ ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪತ್ನಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮೇಡ್ಚಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
