ಬೆಂಗಳೂರು:
ಮೇ 15 ರಂದು ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಭುದ್ದ ಸಾವಿನ ಪ್ರಕರಣವನ್ನು CID ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳು ಮನವಿ ಪುರಸ್ಕರಿಸಿ ಪ್ರಕರಣದ ತನಿಖೆಯನ್ನು CID ಗೆ ವರ್ಗಾಯಿಸಲು ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ನೀಡಿದ ಮನವಿ ಪತ್ರದಲ್ಲಿ ಕೆ.ಆರ್.ಸೌಮ್ಯ, “ಕಳೆದ 28 ವರ್ಷಗಳಿಂದ, ದಲಿತ ಧಮನಿತ ಶೋಷಿತ ಸಮುದಾಯಗಳಿಗಾಗಿ, ಸಾಮಾಜಿಕ ನ್ಯಾಯ, ರಕ್ಷಣೆ ಮತ್ತು ಸಮಾನತೆ ಕೊಡಿಸುವ ಹೋರಾಟದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಬಂದಿರುವ ಕೆ.ಆರ್.ಸೌಮ್ಯ ಆದ ನಾನು ಇದೀಗ ಸ್ವತಃ ಬದುಕಿನಲ್ಲಿ ಘನಘೋರ ಘಾತವನ್ನು ಅನುಭವಿಸುತ್ತಿದ್ದೇನೆ. ನನ್ನ ಮಗಳು ಪ್ರಬುದ್ಧಳ ಭೀಕರ ಸಾವಿನಿಂದ ಘಾಸಿಗೊಂಡಿದ್ದೇನೆ” ಎಂದಿದ್ದಾರೆ.
“ಬೆಂಗಳೂರಿನ ಬಿ.ಎಂ.ಎಸ್. ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿ.ಬಿ.ಎ. ಮಾಡುತ್ತಿದ್ದ ಅತ್ಯದ್ಭುತ ವಾಕ್ಪಟು ಹಾಗೂ ಕ್ರಿಯಾಶೀಲೆಯಾದ ನನ್ನ ಮಗಳು ಪ್ರಬುದ್ಧಳನ್ನು 2024ರ ಮೇ 15ರ ಸಾಯಂಕಾಲ, ನನ್ನ ಮನೆಯಲ್ಲೇ ಭೀಕರ ಹತ್ಯೆ ಮಾಡಲಾಗಿದೆ. ಹತ್ಯೆಯ ಮೊದಲ ದಿನದಿಂದಲೂ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಮತ್ತು ಅವರ ತಂಡ ಸಂಶಯಾಸ್ಪದವಾಗಿ ವರ್ತಿಸುತ್ತಾ ನನ್ನ ಮನಸ್ಸಿಗೆ ಬಹುಘಾತ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪದೇ ಪದೆ ಹೇಳಿದರೂ ಕೇಳಿಸಿಕೊಳ್ಳದ ತನಿಖಾ ತಂಡ ಮೊದಲ ಮೂರ್ನಾಲ್ಕು ದಿನವು ಇದನ್ನು ಆತ್ಮಹತ್ಯೆ ಎಂದೇ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಕೊಲೆಗಡುಕ ಮತ್ತು ಕೊಲೆಗಡುಕನಿಗೆ ಎಲ್ಲ ರೀತಿಯ ಸಹಾಯ ಮಾಡಿ, ಕೊಲೆಯ ಸಂಗತಿಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಕೊಲೆಗಡುಕನ ತಂದೆ ತಾಯಿಯರನ್ನೂ ರಕ್ಷಿಸುವ ದುರುದ್ದೇಶದ ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ” ಎಂದು ದೂರಿದ್ದಾರೆ.
“ಮಗಳನ್ನು ಕಳೆದುಕೊಂಡ ನೋವಿನಲ್ಲೂ ನಾನು ನ್ಯಾಯಕ್ಕಾಗಿ ಶ್ರಮವಹಿಸಿ ಆ ಸಿಸಿಟಿವಿಗಳ ಫೂಟೇಜ್ಗಳ ಕುರಿತು ಗಮನಿಸಲು ಒತ್ತಾಯಿಸಿದಾಗಲೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನಗೆ ಗೊತ್ತಿರುವ ಸತ್ಯವನ್ನು ಕೇಳಿಸಿಕೊಳ್ಳಲೂ ನಿರಾಕರಿಸುತ್ತಿದ್ದಾರೆ. ಕೊಲೆಗಾರನ ತಂದೆ ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಬಾರ್ ನಡೆಸುತ್ತಿದ್ದು, ಪೊಲೀಸರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದು ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಕಾಟಾಚಾರಕ್ಕೆ ಮಹಜರು ನಡೆಸಿದ್ದಾರೆ. ಜೆಜೆಬಿಯಲ್ಲಿ ವಕೀಲರಿಗೆ ಯಾವುದೇ ಮಾಹಿತಿ ಒದಗಿಸದೇ, ಆಪಾದಿತನು ಹತ್ತೇ ದಿನಕ್ಕೆ ಜಾಮೀನು ಪಡೆದು ನಿಶ್ಚಿಂತನಾಗಿ ಓಡಾಡಿಕೊಂಡಿದ್ದಾನೆ” ಎಂದೂ ಅವರು ತಿಳಿಸಿದ್ದಾರೆ.