ಚೆನ್ನೈ:
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯ ಹಗರಣ ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿದೆ. ಮೊದಲ ಬಾರಿಗೆ ನೀಟ್ ವಿರುದ್ಧ ದನಿ ಎತ್ತಿದ ಖ್ಯಾತ ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ವಿಜಯ್ ಅವರು, ನೀಟ್ ನಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನೀಟ್ ಪರೀಕ್ಷೆಯು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ವಿರುದ್ಧವಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರದ ಸುದ್ದಿಯು ದೇಶದಲ್ಲಿ ನೀಟ್ನ ಅಗತ್ಯವೇ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದರು.
ತಮಿಳಗ ವೆಟ್ರಿ ಕಳಗಂ ಪಕ್ಷದ ವತಿಯಿಂದ ಆಯೋಜಿಸಿದ್ದ ಎರಡನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ವಿಜಯ್, ನೀಟ್ ವಿರುದ್ಧ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ಹೇಳಿದರು. ಅಲ್ಲದೆ ಕೇಂದ್ರ ಸರ್ಕಾರ ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸಬೇಕು ಮತ್ತು ರಾಜ್ಯಕ್ಕೆ NEET ನಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ನೀಟ್ ಪರೀಕ್ಷೆಯಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ದೇಶಕ್ಕೆ ನೀಟ್ ಅಗತ್ಯವಿಲ್ಲ. ನೀಟ್ನಿಂದ ವಿನಾಯಿತಿಯೊಂದೇ ಪರಿಹಾರ ಎಂದು ದಳಪತಿ ಹೇಳಿದ್ದಾರೆ.
ಶಿಕ್ಷಣವನ್ನು ಸಾಮಾನ್ಯ ಪಟ್ಟಿಯಿಂದ ರಾಜ್ಯ ಪಟ್ಟಿಗೆ ತರಬೇಕು. ನೀಟ್ ಪರೀಕ್ಷೆಯಿಂದಾಗಿ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಬಡ, ಅರ್ಹ ಮತ್ತು ಅಂಚಿನಲ್ಲಿರುವ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಜಯ್ ಹೇಳಿದ್ದಾರೆ.