ಬೆಂಗಳೂರು:
ಗ್ರೇಟರ್ ಬೆಂಗಳೂರಿನ ಬಗ್ಗೆ ಮಾಸ್ಟರ್ ಪ್ಲಾನ್ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಬಿಬಿಎಂಪಿ ಅಧಿಕಾರಿಗಳ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಯಾವ ಬಿಬಿಎಂಪಿಯನ್ನು ಒಡೆಯುವುದಿಲ್ಲ. ಈಗ ಎಲ್ಲವನ್ನು ಹೇಳಲು ಆಗುವುದಿಲ್ಲ. ಸಭೆ ಸೇರಿದ್ದು ಕೇವಲ ಗ್ರೇಟರ್ ಬೆಂಗಳೂರು ವಿಚಾರಕ್ಕಲ್ಲ. ಚುನಾವಣೆ ಇದ್ದ ಕಾರಣ, ಕಳೆದ ನಾಲ್ಕು ತಿಂಗಳುಗಳಿಂದ ಅನೇಕ ಕೆಲಸಗಳು ಬಾಕಿ ಉಳಿದಿದ್ದವು. ಈ ವಿಚಾರವಾಗಿ ಚರ್ಚೆ ಮಾಡಲು ಸಭೆ ಸೇರಲಾಗಿತ್ತು ಎಂದು ಹೇಳಿದರು. ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ಬಗ್ಗೆ ಕೇಳಿದಾಗ ಇದರ ಬಗ್ಗೆ ಆನಂತರ ಚರ್ಚೆ ಮಾಡುತ್ತೇನೆ. ಚನ್ನಪಟ್ಟಣ ಚನ್ನಪಟ್ಟಣದಲ್ಲಿಯೇ ಇರುತ್ತದೆ, ರಾಮನಗರ ರಾಮನಗರದಲ್ಲಿ ಇರುತ್ತದೆ, ಮಾಗಡಿ ಮಾಗಡಿಯಲ್ಲಿ ಇರುತ್ತದೆ, ಕನಕಪುರ ಕನಕಪುರದಲ್ಲಿಯೇ ಇರುತ್ತದೆ ಎಂದರು.
ಬಿಬಿಎಂಪಿ ಹಾಗೂ ಬಿಡಿಎ ಕಾಮಗಾರಿಗಳಿಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಕೈಡೆಕ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ಯೋಜನೆಗಳೆಲ್ಲವನ್ನೂ ಸಿಎಂಗೆ ವಿವರಿಸಬೇಕಾಗಿದೆ. ಮುಂದಿನ ವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಎಲ್ಲವನ್ನೂ ಚರ್ಚಿಸಲಾಗುತ್ತದೆ ಎಂದು ಹೇಳಿದರು. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್ ಮತ್ತಿತರರು ಸಭೆಯಲ್ಲಿ ಇದ್ದರು.