ಲುಧಿಯಾನಾ
ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟ ಅಗ್ನಿವೀರ ಅಜಯ್ ಕುಮಾರ ಅವರ ಕುಟುಂಬವು ಭಾರತೀಯ ಸೇನೆಯು ತಮ್ಮ ಪುತ್ರನಿಗೆ ‘ಹಿರೋ’ಸ್ಥಾನಮಾನವನ್ನು ನೀಡಬೇಕು ಎಂದು ಆಗ್ರಹಿಸಿದೆ. ಪರಿಹಾರದ ಹಣವು ಅಜಯ್ಗೆ ಬದಲಿಯಲ್ಲ ಎಂದು ಕುಟುಂಬವು ಹೇಳಿದೆ.
‘ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ನಮಗೆ ಪಿಂಚಣಿ ಹಾಗೂ ಕ್ಯಾಂಟೀನ್ ಕಾರ್ಡ್ನ್ನು ನೀಡಬೇಕು’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಜಯ್ ತಂದೆ ಹೇಳಿದರು.
ಇದೇ ಭಾವನೆಗಳನ್ನು ಪ್ರತಿನಿಧಿಸಿದ ಅಜಯ್ ಸೋದರಿ, ಸಾಕಷ್ಟು ಪರಿಹಾರವನ್ನು ಒದಗಿಸಲಾಗಿಲ್ಲ ಎಂದು ಕಳವಳವನ್ನು ವ್ಯಕ್ತಪಡಿಸಿದರು.’ನನ್ನ ಸೋದರ ನಾಲ್ಕು ವರ್ಷಗಳ ಉದ್ಯೋಗಕ್ಕಾಗಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಸರಕಾರವು ಒಂದು ಕೋಟಿ ರೂ.ಪರಿಹಾರದ ಭರವಸೆ ನೀಡುತ್ತಿದೆ. ಆದರೆ ನನ್ನ ಸೋದರನಿಲ್ಲದೆ ಆ ಹಣದಲ್ಲಿ ಕುಟುಂಬವು ಬದುಕಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಅಗ್ನಿವೀರ ಯೋಜನೆಯ ಮರುಮೌಲ್ಯಮಾಪನಕ್ಕೆ ಅವರು ಒತ್ತಾಯಿಸಿದರು.’ಸರಕಾರವು ನಮಗೆ ಹಣ ನೀಡಿದೆ. ಆದರೆ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ನಾವು ಬಯಸಿದ್ದೇವೆ ‘ ಎಂದರು.
‘ನಮ್ಮ ಕುಟುಂಬವು 98 ಲಕ್ಷ ರೂ.ಗಳನ್ನು ಸ್ವೀಕರಿಸಿದೆ. ಆದರೆ ಇದರಲ್ಲಿ ಸೇನೆಯ ಪಾಲು 48 ಲಕ್ಷ ರೂ.ಮಾತ್ರ ‘ಎಂದು ಅಜಯ್ ತಂದೆ ಹೇಳಿದರು. ಇದು ಅಜಯ್ ಕುಟುಂಬಕ್ಕೆ ಒಟ್ಟು 98.39 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂಬ ಸೇನೆಯ ಹೇಳಿಕೆಗೆ ವ್ಯತಿರಿಕ್ತವಾಗಿದೆ.
ಸೇನೆಯು ಬುಧವಾರ ತಡರಾತ್ರಿ ಅಜಯ್ ಕುಟುಂಬಕ್ಕೆ ಭರವಸೆ ನೀಡಿದ್ದಂತೆ ಪರಿಹಾರವನ್ನು ಪಾವತಿಸಲಾಗಿಲ್ಲ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿಯ ಹೇಳಿಕೆಗಳನ್ನು ಸೇನೆಯು ಬುಧವಾರ ತಡರಾತ್ರಿ ಅಲ್ಲಗಳೆದಿದೆ. ಅಜಯ್ ಕುಟುಂಬಕ್ಕೆ ನಿಜಕ್ಕೂ 98.39 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದು ಅದು ದೃಢಪಡಿಸಿದೆ.
ಅಗ್ನಿವೀರ ಅಜಯ್ ಕುಮಾರ ಅವರ ತ್ಯಾಗವನ್ನು ಭಾರತಿಯ ಸೇನೆಯು ಗೌರವಿಸುತ್ತದೆ. ಒಟ್ಟು ಬಾಕಿಯಿರುವ ಹಣದ ಪೈಕಿ 98.39 ಲಕ್ಷ ರೂ.ಗಳನ್ನು ಈಗಾಗಲೇ ಪಾವತಿಸಲಾಗಿದೆ. ಅಗ್ನಿವೀರ ಯೋಜನೆಯ ನಿಬಂಧನೆಗಳಿಗೆ ಅನುಗುಣವಾಗಿ ಎಕ್ಸ್-ಗ್ರೇಷಿಯಾ ಮತ್ತು ಇತರ ಪ್ರಯೋಜನಗಳು ಸೇರಿದಂತೆ 67 ಲಕ್ಷ ರೂ.ಗಳನ್ನು ಅಗತ್ಯ ಪ್ರಕ್ರಿಯೆಗಳು ಮುಗಿದ ಬಳಿಕ ಶೀಘ್ರ ನೀಡಲಾಗುವುದು. ಒಟ್ಟು ಪರಿಹಾರದ ಮೊತ್ತ ಅಂದಾಜು 1.65 ಕೋಟಿ ರೂ.ಗಳಾಗುತ್ತವೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
‘ಮೊದಲು ನಾವು ಐಸಿಐಸಿಐ ಬ್ಯಾಂಕಿನಿಂದ 50 ಲಕ್ಷ ರೂ.ಗಳ ವಿಮೆ ಹಣವನ್ನು ಸ್ವೀಕರಿಸಿದ್ದೇವೆ. ಬಳಿಕ ಸೇನೆಯಿಂದ 48 ಲಕ್ಷ ರೂ.ಗಳನ್ನು ಪಡದಿದ್ದೇವೆ. ಇನ್ನೂ 60 ಲಕ್ಷ ರೂ.ಗಳನ್ನು ನೀಡುವುದಾಗಿ ಸೇನೆಯು ನಮಗೆ ತಿಳಿಸಿದೆ. ಅದನ್ನಿನ್ನೂ ನಾವು ಸ್ವೀಕರಿಸಿಲ್ಲ. ಅದು ಯಾವಾಗ ಬರುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ ‘ಎಂದು ಅಜಯ್ ತಂದೆ ಹೇಳಿದರು.
