ಬೆಂಗಳೂರು:
ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಕ್ಕಳೊಂದಿಗೆ ಸಂವಾದ ನಡೆಸಿದರು. ಎಸ್‌ಸಿ, ಎಸ್‌ಟಿ ಪರಿಷತ್ ಸಭೆ ನಡೆಸಿದ ನಂತರ ನೇರವಾಗಿ ಶಾಲೆಗೆ ತೆರಳಿದ ಸಿಎಂ. 250 ವಿದ್ಯಾರ್ಥಿಗಿರುವ ಚಾಮರಾಜಪೇಟೆಯ ಮೊರಾರ್ಜಿ ಶಾಲೆಗೆ ಭೇಟಿ ನೀಡಿ, ಮೊದಲಿಗೆ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪಠ್ಯಪುಸ್ತಕ, ಬಾತ್ ರೂಂ ಕಿಟ್‌ಗಳ ಸಮರ್ಪಕ ವಿತರಣೆ ಬಗ್ಗೆ ಮಾಹಿತಿ ಪಡೆದರು. ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದ ಸಿಎಂ ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು. ಆಗಾಗ ಪಲಾವ್ ಕೊಡುತ್ತಾರೆಂದು ವಿದ್ಯಾರ್ಥಿಗಳು ಖುಷಿಪಟ್ಟರು.ಶಾಲೆಯಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರು ವಿವರಣೆ ನೀಡಿದರು. ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ಸಿಎಂಗೆ ವಿದ್ಯಾರ್ಥಿಗಳು ತಿಳಿಸಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಕ್ಕಳಿಗೆ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದು ಏಕೆ ಎಂದು ಪ್ರಶ್ನೆ ಕೇಳಿದರು. ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಸಾಮಾಜಿಕ ಕ್ರಾಂತಿ ನಡೆಸಿದ ಬಸವಣ್ಣನವರು ಎಂದು ಸಿಎಂ ತಾವೇ ಮಕ್ಕಳಿಗೆ ಉತ್ತರಿಸಿದರು.
ಬಳಿಕ ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ ಹೇಳಿಕೊಡುವ ಮೂಲಕ ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದರು.
ಮುಂದುವರಿದು, ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನೆ ಕೇಳಿದರು. ಒಬ್ಬ ವಿದ್ಯಾರ್ಥಿ ನೀವೇ ಆರಂಭಿಸಿದ್ದು ಎಂದು ಉತ್ತರ ನೀಡಿದ, ಆದರೆ, ಇಸವಿ ಹೇಳಲಿಲ್ಲ. ಆಗ ಸಿಎಂ ಸಿದ್ದರಾಮಯ್ಯ, 94-95 ರಲ್ಲಿ ಆರಂಭಿಸಿದ್ದಾಗಿ ಹೇಳಿದರು. ಮಕ್ಕಳು ಚಪ್ಪಾಳೆ ತಟ್ಟಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಇತರರು ಉಪಸ್ಥಿತರಿದ್ದರು.
![](https://prajapragathi.com/wp-content/uploads/2024/07/c-m-siddaramaiah-in-murarji.gif)