ಬೀರ್‌ ಮತ್ತು ಬಾಡೂಟಕ್ಕಾಗಿ ಮುಗಿಬಿದ್ದ ಜನ ವೈರಲ್‌ ಆಯ್ತು ವಿಡೀಯೋ…..!

ಬೆಂಗಳೂರು:

   ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ, ಬಾಡೂಟಕ್ಕೆ ಜನರು ಮುಗಿಬಿದ್ದಿದ್ದು, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

   ನೆಲಮಂಗಲದ ಹೊರವಲಯದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಜನರಿಗಾಗಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.ಬಗೆಬಗೆಯ ಬಾಡೂಟ ಖಾದ್ಯಕ್ಕಾಗಿ ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಸಮಾರಂಭಕ್ಕೆ ಬಂದಿದ್ದ ಕಾರ್ಯಕರ್ತರಿಗೆ ಬಾಡೂಟದ ಜೊತೆಗೆ ಮದ್ಯವನ್ನೂ ಕೂಡ ನೀಡಲಾಗಿತ್ತು. ಎಣ್ಣೆ ಪಡೆದುಕೊಳ್ಳಲು ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಈ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು
   ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಾಹಾರ, ಬಿಯರ್, ಗಟ್ಟಿ ಮದ್ಯದ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು ಎಂದು ವರದಿಗಳು ತಿಳಿಸಿವೆ.ಸಮಾರಂಭದ ಸಂಘಟಕರು 10,000-15,000 ಜನರನ್ನು ನಿರೀಕ್ಷಿಸಿದ್ದರು. ಆದರೆ, 60,000 ಕ್ಕೂ ಹೆಚ್ಚು ಜನರು ಸೇರಿದ್ದರು. ನಿರೀಕ್ಷಿತ ಸಂಖ್ಯೆಯೇ ಆಗಿದ್ದರೂ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.ಭವಿಷ್ಯದಲ್ಲಿ ಅಬಕಾರಿ ಇಲಾಖೆ ಇಂತಹ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪರವಾನಗಿ ನೀಡಬಾರದು ಎಂದು ಹೇಳಿದ್ದಾರೆ.
   ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಅವರು ಮದ್ಯ ಪೂರೈಸಲು ಪರವಾನಗಿ ನೀಡದಂತೆ ಅಬಕಾರಿ ಇಲಾಖೆಗೆ ಸೂಚಿಸಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಅಬಕಾರಿ ಇಲಾಖೆಯ ಉಪಆಯುಕ್ತ ನಾಗೇಶ್ ಕುಮಾರ್ ಅವರು ಮಾತನಾಡಿ, ಕಾರ್ಯಕ್ರಮ ಆಯೋಜಕರು ಅನುಮತಿಗಾಗಿ ನೆಲಮಂಗಲ ಡಿವೈಎಸ್ಪಿ ಮುಂದೆ ಮನವಿ ಮಾಡಿಕೊಂಡಿದ್ದರು. 11,500 ರೂ ಶುಲ್ಕವನ್ನೂ ಪಾವತಿಸಿದರು, ನಂತರ ನಾವು ಒಂದು ದಿನದ ಪರವಾನಗಿಯನ್ನು ನೀಡಿದ್ದೆವು ಎಂದು ಹೇಳಿದ್ದಾರೆ.ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಶಾಸಕ ನಾಗರಾಜು, ಜೆಡಿಎಸ್‌ನ ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ ಕೂಡ ಭಾಗವಹಿಸಿದ್ದು ಕಂಡು ಬಂದಿತ್ತು.

   ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸುಧಾಕರ್ ಅವರು, ಮದ್ಯ ವಿತರಣೆ ಬಗ್ಗೆ ನನಗೆ ತಿಳಿದಿಲ್ಲ. ಇಂತಹದ್ದನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಕಾರ್ಯಕ್ರದಲ್ಲಿ ಭಾಗವಹಿಸಿದ್ದವರು ಎಲ್ಲೋ ಮದ್ಯವನ್ನು ಖರೀದಿಸಿದ್ದು, ಅದನ್ನು ಸ್ಥಳಕ್ಕೆ ತಂದಿರಬಹುದು ಎಂದು ಹೇಳಿದ್ದಾರೆ.

   ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸುಧಾಕರ್ ಅವರನ್ನು ಟೀಕಿಸಿದ್ದಾರೆ.

   ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ. ರಾಜ್ಯ ಡೆಂಗ್ಯೂ ಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ ? ಇದೇನಾ ನಿಮ್ಮ ಸಂಸ್ಕ್ರತಿ ? ಎಂದು ವ್ಯಂಗ್ಯವಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap