ಬೆಂಗಳೂರು:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಭೀತಿ ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಸ್ವಚ್ಛ ಕಾಪಾಡದ ಜನರ ಮೇಲೆ ದಂಡ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ.
ಖಾಸಗಿ ಜಾಗಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತಿಯಾಗುವ ಜಾಗ ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿಮುಟ್ಟಿಸಲು ಪಾಲಿಕೆ ಹೊರಟಿದ್ದು, ಎಲ್ಲೆಂದರಲ್ಲಿ ಕಸ ಎಸೆದರೆ, ನೀರು ನಿಂತು ಸೊಳ್ಳೆ ಬಂದರೆ ಆ ಭೂಮಿ ಮಾಲೀಕರಿಗೆ ದಂಡ ವಿಧಿಸಲು ಮುಂದಾಗಿದೆ.
ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುನ್ಸಿಪಲ್ ಕಾಯ್ದೆ ಪ್ರಕಾರ ಅಶುಚಿತ್ವಕ್ಕೆ 50 ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಆದರೆ, ಇದೀಗ ಆ ದಂಡದ ಮೊತ್ತವನ್ನ 500 ರೂಪಾಯಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಏರಿಯಾಗಳು, ಮನೆಗಳು, ಖಾಸಗಿ ಜಾಗಗಳಲ್ಲಿ ಅಶುಚಿತ್ವ ಕಂಡು ಬಂದರೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ದಂಡದ ಬಳಿಕವೂ ಶುಚಿತ್ವ ಕಾಪಾಡದಿದ್ದರೆ ಪ್ರತಿನಿತ್ಯ 15 ರೂ. ದಂಡ ವಿಧಿಸೋಕೆ ಪಾಲಿಕೆ ಪ್ರಸ್ತಾವನೆ ಇಟ್ಟಿದೆ. ಸದ್ಯ ಕಾನೂನಿನ ಪ್ರಕಾರ 50 ರೂಪಾಯಿಯಷ್ಟೇ ದಂಡ ವಿಧಿಸಲು ಅವಕಾಶವಿದೆ.
ದಂಡದ ಮೊತ್ತ ಹೆಚ್ಚುವ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಾಗಿದೆ. ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಸುಮಾರು 14 ಲಕ್ಷ ಮನೆಗಳಿಗೆ ಭೇಟಿ ನೀಡಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ದೃಢಪಡಿಸಿದ್ದಾರೆ.ಈ ಕ್ರಮಗಳು ಜನರ ಸುರಕ್ಷತೆಗೆ ಅತ್ಯಗತ್ಯವಾಗಿರುವುದರಿಂದ ಹೆಚ್ಚಿನ ದಂಡಗಳು ಜನರನ್ನು ಹೆಚ್ಚು ಜಾಗರೂಕರಾಗಿರುವಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಪಾಲಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಸಾರ್ವಜನಿಕ ಸ್ಥಳಗಳಷ್ಟು ಕೊಳಕಾಗಿರುವ ಸ್ಥಳಗಳು ಬೆಂಗಳೂರಿನಲ್ಲಿ ಬೇಕಾದಷ್ಟಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದನ್ನೇ ಮರೆತಿರೋ ಪಾಲಿಕೆ, ಇದೀಗ ಜನಸಾಮಾನ್ಯರ ಮೇಲೆ ದಂಡ ಹಾಕಲು ಹೊರಟಿರೋದಕ್ಕೆ ಸಿಲಿಕಾನ್ ಸಿಟಿ ಜನತೆ ಆಕ್ರೋಶ ಹೊರಹೊರ ಹಾಕುತ್ತಿದ್ದಾರೆ.