ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ …!

ಬೆಂಗಳೂರು

   ಕರ್ನಾಟಕದ ಸರ್ಕಾರಿ ನೌಕರರು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಕಾಯುತ್ತಿದ್ದಾರೆ. ಸರ್ಕಾರ ವರದಿ ಜಾರಿ ವಿಳಂಬ ಮಾಡುತ್ತಿದೆ ಎಂದು ನೌಕರರು ಅಸಮಾಧಾನಗೊಂಡಿದ್ದಾರೆ. ಈ ನಡುವೆ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ.

   ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 16 ರಂದು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ಸ್ವೀಕಾರ ಮಾಡಿದ್ದರು. ಅವರು ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಿದ್ದರು. 

   7ನೇ ವೇತನ ಆಯೋಗದ ವರದಿಯಲ್ಲಿ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಮುಖ್ಯಮಂತ್ರಿಗಳು ಹಣಕಾಸು ಇಲಾಖೆಗೆ ವರದಿ ನೀಡಿದ್ದು, ಇಲಾಖೆ ನೀಡುವ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರ ಶಿಫಾರಸು ಜಾರಿ ಕುರಿತು ಅಂತಿಮ ತೀರ್ಮಾನ ಮಾಡಲಿದೆ.

   7ನೇ ವೇತನ ಆಯೋಗದ ವರದಿ ಜಾರಿಗೆ ಹಣಕಾಸು ಹೊಂದಾಣಿಕೆ ಕುರಿತು ವರದಿ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ಈಗ ಅಧಿಕಾರಿಗಳು ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದು, ಆಗಸ್ಟ್‌ನಲ್ಲಿ ವರದಿ ಶಿಫಾರಸು ಜಾರಿ ಕುರಿತು ಸರ್ಕಾರ ತೀರ್ಮಾನ ಘೋಷಣೆ ಮಾಡುವ ನಿರೀಕ್ಷೆ ಇದೆ.

   ವೇತನ ಆಯೋಗ ವರದಿ ನೀಡುವಾಗ ಶೇ 27ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಶೇ 17ರ ಮಧ್ಯಂತರ ಪರಿಹಾರ ಘೋಷಣೆ ಮಾಡಿತ್ತು. ಆದ್ದರಿಂದ ಈಗ ಸರ್ಕಾರ ಶೇ 10.5ರಷ್ಟು ಹೆಚ್ಚಳ ಮಾಡಲು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಇದೆ. ಆಯೋಗ ಶಿಫಾರಸು ಮಾಡಿರುವ ಭತ್ಯೆ ಹೊರತುಪಡಿಸಿ ಉಳಿದ ಯಾವುದೇ ಭತ್ಯೆ ನೀಡುವುದಿಲ್ಲ.

    ಸರ್ಕಾರಿ ನೌಕರರಿಗೆ ವೇತನ, ಭತ್ಯೆ ಹೆಚ್ಚಳಕ್ಕಾಗಿಯೇ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್‌ನಲ್ಲಿ 14 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ವರ್ಷಕ್ಕೆ ಸುಮಾರು 17 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಸಚಿವರಿಗೆ ವಿವರಣೆ ನೀಡಿದ ಬಳಿಕ ಅಂತಿಮ ಆದೇಶ ಪ್ರಕಟಿಸುವ ನಿರೀಕ್ಷೆ ಇದೆ.

    7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಜುಲೈ ಅಂತ್ಯ ಅಥವ ಆಗಸ್ಟ್ ಮೊದಲ ವಾರದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುವ ಸಾಧ್ಯತೆ ಇದೆ. ಆದ್ದರಿಂದ ಜುಲೈ 15ರ ಸಚಿವ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿಗಳು ಸಚಿವರಿಗೆ ಹಣಕಾಸು ಇಲಾಖೆ ನೀಡಿರುವ ವರದಿ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೊದಲ ಹಂತದಲ್ಲಿ ಜುಲೈ 8 ರಿಂದ 14ರ ತನಕ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ಮಾಡಲಿದೆ. ಬಳಿಕ ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸಿ, ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರದ ದಿನಾಂಕವನ್ನು ನಿರ್ಧರಿಸಿದೆ.

    ಸರ್ಕಾರಿ ನೌಕರರು 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಸೇರಿ ಒಟ್ಟು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸರ್ಕಾರ ಸಹ ಇವುಗಳನ್ನು ಈಡೇರಿಸುವ ಭರವಸೆ ಮಾತ್ರ ನೀಡುತ್ತಿದೆ. ಇದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link