ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಭೇಟಿ ನಿಷೇಧ …..!

ಹಾಸನ:

    ಇತ್ತೀಚಿಗೆ ಪ್ರವಾಸಿಗರು ಖಾಸಗಿ ವಾಹನಗಳನ್ನು ಬೆಟ್ಟಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಸ್ಥಳೀಯ ವಾಹನಗಳ ಚಾಲಕರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಆಗಾಗ ನಡೆಯುತ್ತಿದ್ದ ಜಗಳಕ್ಕೆ ಕಡಿವಾಣ ಹಾಕಿ ಪ್ರಕೃತಿಯನ್ನು ರಕ್ಷಿಸಲು ಇಲಾಖೆ ಈ ಕಾರ್ಯತಂತ್ರ ರೂಪಿಸಿದೆ. ಪಟ್ಲ ಬೆಟ್ಟವು ಸಕಲೇಶಪುರ ಪಟ್ಟಣದಿಂದ 40 ಕಿಲೋ ಮೀಟರ್ ದೂರದಲ್ಲಿದೆ.

    ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಪ್ರವಾಸಿಗರ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ರೂಪಿಸಲು ಇಲಾಖೆ ಯೋಜಿಸುತ್ತಿದೆ. ಭವಿಷ್ಯದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಆನ್‌ಲೈನ್ ಬುಕಿಂಗ್ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಪ್ರವಾಸಿಗರೊಬ್ಬರು ಸ್ವಂತ ವಾಹನದಲ್ಲಿ ಗಿರಿಧಾಮಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯ ವಾಹನ ಚಾಲಕರಿಂದ ಹಲ್ಲೆಗೆ ಒಳಗಾಗಿದ್ದರು. ಯಸಳೂರು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು.ಗ್ರಾಮಸ್ಥರು ಹೇಳುವ ಪ್ರಕಾರ, ಪ್ರವಾಸಿಗರು ಮತ್ತು ಸ್ಥಳೀಯ ವಾಹನಗಳ ಚಾಲಕರ ನಡುವೆ ಜಗಳ ಸಾಮಾನ್ಯವಾಗಿದೆ. ಸ್ಥಳೀಯ ಜನರು ಇಲ್ಲಿನ ವಾಹನ ಚಾಲಕರ ಬಗ್ಗೆ ಭಯದಿಂದ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಾರೆ.

    ಈ ಮಧ್ಯೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಘಟನೆಯ ಬಗ್ಗೆ ಡಿಸಿಎಫ್‌ನಿಂದ ವಿವರವಾದ ವರದಿಯನ್ನು ಕೇಳಿದ್ದಾರೆ. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಲ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದರು.

   ಅರಣ್ಯಕ್ಕೆ ತೊಂದರೆಯಾಗದಂತೆ ಮೂಲ ಸೌಕರ್ಯಗಳೊಂದಿಗೆ ಸ್ಥಳವನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

   ಪ್ರವಾಸಿಗರು ಸ್ವಂತ ವಾಹನಗಳನ್ನು ಬೆಟ್ಟದ ತುದಿಗೆ ಕೊಂಡೊಯ್ದು ಗಿರಿಧಾಮವನ್ನು ಹಾಳು ಮಾಡಿದ್ದಾರೆ ಎಂದು ಬೆಟ್ಟದ ತಪ್ಪಲಿನಲ್ಲಿರುವ ಪಟ್ಲ ಗ್ರಾಮದ ರವಿಕುಮಾರ್ ಆರೋಪಿಸುತ್ತಾರೆ. ಪ್ರವಾಸಿ ತಾಣಗಳ ನಿರ್ವಹಣೆಗೆ ಮಾರ್ಗಸೂಚಿ ರೂಪಿಸಿ ಸ್ಥಳೀಯಾಡಳಿತಕ್ಕೆ ನಿರ್ದೇಶನ ನೀಡುವುದು ಉತ್ತಮ ಎಂದು ಅವರು ಹೇಳುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap