ಪುಣೆ:
ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಇದೀಗ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಾಶಿಮ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಸೋಮವಾರ ವಾಶಿಮ್‌ನಲ್ಲಿರುವ ಪೂಜಾ ಖೇಡ್ಕರ್ ಅವರ ನಿವಾಸಕ್ಕೆ ಭೇಟಿ ಮಾಡಿದ ವೇಳೆ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರ ವಿರುದ್ಧ ಕಿರುಕುಳದ ದೂರು ನೀಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಹಿಂದಿನ ದಿನ, ಟಿವಿ ಸುದ್ದಿ ವಾಹಿನಿಗಳೊಂದಿಗೆ ಮಾತನಾಡುವಾಗ ಪೊಲೀಸ್ ಸಿಬ್ಬಂದಿಯ ಭೇಟಿಯ ಉದ್ದೇಶವನ್ನು ವಿವರಿಸಲು ಖೇಡ್ಕರ್ ನಿರಾಕರಿಸಿದ್ದರು.
ಭಾರತೀಯ ಆಡಳಿತ ಸೇವೆಗೆ ಸೇರಲು ಅಂಗವೈಕಲ್ಯ ಮತ್ತು ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡ ಆರೋಪದ ನಡುವೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆಗೊಂಡ ಖೇಡ್ಕರ್ ಅವರ ಪ್ರೊಬೇಷನರಿ ಅವಧಿಯನ್ನು ಸ್ಥಗಿತಗೊಳಿಸಲಾಗಿದ್ದು, ವಾಪಸ್ ಅಕಾಡೆಮಿಗೆ ಮರಳುವಂತೆ ಸೂಚಿಸಲಾಗಿದೆ.
ಜುಲೈ 23 ರೊಳಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಗೆ ವಾಪಸ್ ತೆರಳುವಂತೆ ಆಕೆಗೆ ತಿಳಿಸಲಾಗಿದೆ. ಮುಂದಿನ ಅಗತ್ಯ ಕ್ರಮಕ್ಕಾಗಿ ಆಕೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.