ವಿಶೇಷ ನ್ಯಾಯಲಯದಿಂದ ಪ್ರಧಾನಿ ವಿರುದ್ಧದ ದೂರು ವಜಾ

ಬೆಂಗಳೂರು: 

   ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

   ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ದೇಶ ಸಂಪತ್ತನ್ನು ಮರುಹಂಚಿಕೆ ಮಾಡುವುದಾಗಿ ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಜಿಯಾವುರ್ ರೆಹಮಾನ್ ನೊಮಾನಿ ಅವರು ಖಾಸಗಿ ದೂರು ದಾಖಲಿಸಿದ್ದರು. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ ಎನ್ ಶಿವಕುಮಾರ್ ಅವರು ಇಂದು ಈ ಖಾಸಗಿ ದೂರನ್ನು ವಜಾಗೊಳಿಸಿದರು.

   ಪ್ರಧಾನಿಯ ಭಾಷಣವು ಮುಸ್ಲಿಮರನ್ನು ನಿಂದಿಸುವಂತಿದೆ. ಈ ದೇಶದ ಸಂಪತ್ತನ್ನು ಲೂಟಿ ಹೊಡೆದ ನುಸುಳುಕೋರರಿಗೆ ಇಲ್ಲಿರುವ ಮುಸ್ಲಿಮರನ್ನು ಹೋಲಿಕೆ ಮಾಡುವಂತೆ ಉಳಿದ ಜನರನ್ನು ಪ್ರೇರೇಪಿಸುವಂತಿದೆ. ಹಾಗಾಗಿ, ಸಮಾಜದಲ್ಲಿ ದ್ವೇಷ ಹರಡಿದ, ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಪ್ರಧಾನಿ ಮೋದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರಿನ ಹೆಬ್ಬಾಳದ ನಿವಾಸಿ 32 ವರ್ಷದ ಜಿಯಾವುರ್‌ ರಹಮಾನ್‌ ನೊಮಾನಿ ಬೆಂಗಳೂರಿನ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಮೇ 23ರಂದು ಖಾಸಗಿ ದೂರು ಸಲ್ಲಿಸಿದ್ದರು.

   ರಾಜಸ್ಥಾನದಲ್ಲಿ ನಡೆದಿದ್ದ ಪ್ರಚಾರ ಭಾಷಣದಲ್ಲಿ ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಕ್ರಿಮಿನಲ್‌ ಪ್ರಚೋದನೆ ನೀಡುವ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 295ಎ, 503, 504, 505(2) ಅಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಅಮೃತಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸುವಂತೆ ಖಾಸಗಿ ದೂರಿನಲ್ಲಿ ಮನವಿ ಮಾಡಿದ್ದರು. ಆದರೆ, ಕೋರ್ಟ್, ದ್ವೇಷ ಭಾಷಣದ ಯಾವುದೇ ಅಂಶಗಳು ಪ್ರಧಾನಿ ಹೇಳಿಕೆಯಲ್ಲಿ ಇಲ್ಲ ಎಂದು ಹೇಳಿ ನ್ಯಾಯಾಲಯ ಖಾಸಗಿ ದೂರನ್ನು ವಜಾಗೊಳಿಸಿತು.

Recent Articles

spot_img

Related Stories

Share via
Copy link