ಬೆಂಗಳೂರು :
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಭಾರಿ ಅವ್ಯವಹಾರ ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರ ತರುವ ಇಂತಹ ಹಗರಣ ನಡೆಯದಂತೆ ತಡೆಯಲು ಮಹತ್ವದ ಕ್ರಮ ಕೈಗೊಂಡಿದೆ.ನಿಗಮ, ಮಂಡಳಿಗಳ ಹಣ ಬಳಕೆ ಸಂಬಂಧ ಹೊಸ ಮಾರ್ಗಸೂಚಿ ರೂಪಿಸಿದ ನಂತರ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದು, ವಾಲ್ಮೀಕಿ ನಿಗಮದ ಹಗರಣದಲ್ಲಿ ನಿಗಮದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ಉಳಿದ ನಿಗಮ, ಮಂಡಳಿಗಳಲ್ಲಿ ಈ ರೀತಿ ಆಗದಂತೆ ಖಜಾನೆಯಿಂದಲೇ ನೇರವಾಗಿ ಹಣ ಬಿಡುಗಡೆ ಮಾಡಲು ಸ್ಪಷ್ಟ ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರ ನಿಗಮ, ಮಂಡಳಿಗಳಿಗೆ ಹಣ ನೀಡುತ್ತಿತ್ತು. ಅದನ್ನು ನಿಗಮ, ಮಂಡಳಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿರಿಸಿಕೊಂಡು ಬಳಕೆ ಮಾಡುತ್ತಿದ್ದವು. ಅಲ್ಲಿನ ಹಣ ವರ್ಗಾವಣೆಗೆ ಎಂಡಿಗಳಿಗೆ ಅಧಿಕಾರ ಇರುತ್ತಿತ್ತು. ಇನ್ನು ಮುಂದೆ ಸರ್ಕಾರವೇ ನೇರವಾಗಿ ಖಜಾನೆಯಿಂದ ನಿಗಮ, ಮಂಡಳಿಗಳಿಗೆ ಹಣ ಬಿಡುಗಡೆಯಾಗಲಿದ್ದು, ಆಗ ನಿಗಮ, ಮಂಡಳಿಗಳು ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟುಕೊಂಡು ಅವ್ಯವಹಾರ ನಡೆಸುವುದು ತಪ್ಪಲಿದೆ ಎಂದು ಹೇಳಲಾಗಿದೆ.