ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ….!: ಡಿ ಕೆ ಶಿವಕುಮಾರ್‌

ಮೈಸೂರು:

   ವಾರಣಾಸಿಯಲ್ಲಿ ಗಂಗಾ ಆರತಿ ನಡೆಸಿದಂತೆ, ಕಾವೇರಿ ಆರತಿ ಕಾರ್ಯಕ್ರಮ ಪ್ರಾರಂಭಿಸುವ ಆಲೋಚನೆ ಇದೆ. ಕೊಡಗು, ಮೈಸೂರು ಹಾಗೂ ಕಾವೇರಿ ಪ್ರದೇಶದ ಶಾಸಕರು ಹಾಗು ಅಧಿಕಾರಿಗಳು ಸೇರಿದ 20 ಜನರ ಸಮಿತಿಯನ್ನು ರಚನೆ ಮಾಡಿ, ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಕೆಆರ್ ಎಸ್ ಅಣೆಕಟ್ಟು ವೀಕ್ಷಣೆ ನಂತರ ಮಾತನಾಡಿದರ. ಗಂಗಾ ಆರತಿ ಕಾರ್ಯಕ್ರಮವನ್ನು ಅಧ್ಯಯನ ಮಾಡಿ, ಒಂದು ತಿಂಗಳೊಳಗೆ ವರದಿ ನೀಡಲು ಸೂಚಿಸಿದ್ದೇನೆ. ಅದೇ ಮಾದರಿಯಲ್ಲಿ ವಿನೂತನವಾಗಿ ‘ಕಾವೇರಿ ಆರತಿ’ಯನ್ನು ಕಾವೇರಿ ನೀರಾವರಿ ನಿಗಮ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಶೀಘ್ರ ನೆರವೇರಿಸುತ್ತೇವೆ ಎಂದು ಹೇಳಿದರು.  

    ಕಾವೇರಿ ಬೃಂದಾವನ ಅಮ್ಯೂಸ್ ಮೆಂಟ್ ಉದ್ಯಾನಕ್ಕೆ ಹೊಸ ರೂಪ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದರ ಅಭಿವೃದ್ದಿ ಮಾಡಲಾಗುವುದು. ಈ ವಿಚಾರ ಇನ್ನೆರಡು ದಿನಗಳಲ್ಲಿ ಕ್ಯಾಬಿನೆಟ್ ಮುಂದೆ ಚರ್ಚೆಗೆ ಬರುತ್ತದೆ. ಈ ಯೋಜನೆಯಿಂದ ಈ ಭಾಗದ 8-10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ಕಳೆದ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ದಿನಕ್ಕೆ ಬರುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಪ್ರವಾಸಕ್ಕೆ ಬಂದವರು ಒಂದೆರಡು ದಿನ ಇಲ್ಲಿ ಉಳಿದುಕೊಂಡು ಹೋಗುವಂತಹ ವ್ಯವಸ್ಥೆ ಮಾಡಬೇಕು. ಬೆಂಗಳೂರಿನಿಂದ ಒಂದೂವರೆ ತಾಸಿನಲ್ಲಿ ಬರಬಹುದು. ಇಲ್ಲಿಂದ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.

   ಬೃಂದಾವನದಲ್ಲಿ ಹೊಸ ಯೋಜನೆ ಇರುತ್ತದೆಯೇ? ಅಥವಾ ಹೊಸ ಮಾದರಿ ಇರಲಿದೆಯೇ ಮತ್ತು ಈಗ ಇರುವ ಅವಲಂಭಿತರ ಪರಿಸ್ಥಿತಿ ಏನು ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಯ ಸಂಪೂರ್ಣ ವರದಿ ಬಂದಾಗ ಈ ಎಲ್ಲದರ ಬಗ್ಗೆ ಪರಿಶೀಲಿಸಲಾಗುವುದು. ಸ್ಥಳೀಯರು ಯಾವುದೇ ಆತಂಕ ಪಡಬೇಕಾಗಿಲ್ಲ. 10 ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡರೆ ದೊಡ್ಡ ಯೋಜನೆ ಸಾಕಾರವಾಗುವುದಿಲ್ಲ. ಹೂವಿನ ಹಾರ ಹಾಕುವವರು, ಕಲ್ಲು ಹೊಡೆಯುವವರು ಎಲ್ಲರೂ ಇದ್ದೇ ಇರುತ್ತಾರೆ. ಗುಂಡೂರಾವ್ ಅವರ ಕಾಲದಲ್ಲಿ ಕಾರಂಜಿಗಳನ್ನು ಮಾಡಲಾಯಿತು. ಈಗ ಹೊಸ ರೀತಿಯಲ್ಲಿ ವಿನ್ಯಾಸ ಮಾಡಲಾಗುವುದು. ಕಾವೇರಿ, ಬೃಂದಾವನ ಹೆಸರನ್ನು ಬಿಡುವ ಪ್ರಮೇಯವೇ ಇಲ್ಲ. ಇವು ನಮ್ಮ ಬ್ರಾಂಡ್ ಎಂದರು.

  ಯಾರನ್ನೂ ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗ ಇರುವ ಜಮೀನಿನಲ್ಲೆ ಯೋಜನೆ ಮಾಡಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಮಧ್ಯದಲ್ಲಿ ಯಾವುದಾದರೂ ಭೂಮಿ ಇದ್ದರೆ ಅದನ್ನು ಪಡೆಯಲಾಗುವುದು. ತಾಂತ್ರಿಕ ಸಮಿತಿ ವರದಿಯ ನಂತರ ತೀರ್ಮಾನ ಮಾಡಲಾಗುವುದು. ಪಿಪಿಪಿ ಮಾದರಿಯಲ್ಲಿ ಬರುವವರು ಎಷ್ಟು ಬಂಡವಾಳ ಹಾಕುತ್ತಾರೆ ಎನ್ನುವುದು ಯಾರಿಗೆ ತಿಳಿದಿದೆ? ನಾನು ಇನೋವ ಕಾರಿನಲ್ಲಿ ಬಂದೆ ಮದ್ದೂರು ಶಾಸಕ ಬೆಂನ್ಜ್ ಕಾರಿನಲ್ಲಿ ಬಂದರು. ರೈತ ಸಂಘದ ಶಾಸಕರು ಸಾಮಾನ್ಯ ಕಾರಿನಲ್ಲಿ ಬಂದರು. ಅವರ ಅನುಕೂಲಕ್ಕೆ ತಕ್ಕಂತೆ ಆಗುತ್ತದೆ ಎಂದು ಹೇಳಿದರು. ಅಣೆಕಟ್ಟು ಸುರಕ್ಷತೆಯ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್ ನಿಲ್ಲಿಸುವ ಬಗ್ಗೆ ಕೇಳಿದಾಗ “ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಮಗೆ ಎಲ್ಲಿ ಬೇಕಾದರೂ ಕಲ್ಲು ಸಿಗುತ್ತದೆ. ಡ್ಯಾಂ ಮತ್ತೆ ಸಿಗುವುದಿಲ್ಲ. ಜಿಲ್ಲಾ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ಅನೇಕ ವಿಚಾರಗಳನ್ನು ತಂದಿದ್ದಾರೆ” ಎಂದರು.

   ಯಾರೊ ಮಾತನಾಡುತ್ತಾರೆ ಎಂದು ಉತ್ತರ ಕೊಡುವ ಅಗತ್ಯವಿಲ್ಲ. ಅವರಿಗೆ ಪ್ರಚಾರ ಬೇಕು, ಅದಕ್ಕೆ ಮಾತನಾಡುತ್ತಾರೆ. ನನಗೆ ಪ್ರಚಾರದ ಗೀಳಾಗಲಿ, ಅವರ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು, ನನ್ನ ಕೆಲಸ, ರಾಜ್ಯದ ರೈತರ ಹಿತ ಅಷ್ಟೇ ಸಾಕು. ನನ್ನ ನೆನೆಸಿಕೊಳ್ಳದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ” ಎಂದರು. ಸದ್ಯಕ್ಕೆ ಮೇಕೆದಾಟು ಯೋಜನೆ ಬಗ್ಗೆ ಉತ್ತರ ನೀಡುವುದಿಲ್ಲ. ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ. ನಾವು ಸಲ್ಲಿಸಿರುವ ದಾಖಲೆಗಳು ಈ ಯೋಜನೆಗೆ ಭದ್ರ ಅಡಿಪಾಯ ಹಾಕಿದ್ದು, ನ್ಯಾಯಾಲಯವೇ ಈ ವಿಚಾರವಾಗಿ ತೀರ್ಮಾನ ಮಾಡಲಿದೆ” ಎಂದರು. ವಿಧಾನಸಭೆ ಮುಗಿದ ನಂತರ ಬಾಗಿನ ಅರ್ಪಣೆಗೆ ದಿನಾಂಕ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಬಿಳಿಗುಂಡ್ಲುವಿನಲ್ಲಿ ದಾಖಲಾದಂತೆ ಇದುವರೆಗು ತಮಿಳುನಾಡಿಗೆ 30 ಟಿಎಂಸಿ ನೀರನ್ನು ಹರಿಸಲಾಗಿದೆ. 10 ಟಿಎಂಸಿ ನೀರನ್ನು ಹರಿಸಿದರೆ ಸಾಮಾನ್ಯ ವರ್ಷದಲ್ಲಿ 40 ಟಿಎಂಸಿ ನೀರು ಹರಿಸಿದಂತಾಗುತ್ತದೆ. ನಿತ್ಯ 51 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ಜಲಾನಯನ ಪ್ರದೇಶದಿಂದ ಹರಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link