ಕೇಂದ್ರ ಬಜೆಟ್‌ ಎಫೇಕ್ಟ್‌ : ಕುಸಿದ ಟಾಟಾ, ಮಾರುತಿ , ಮಹೀಂದ್ರ ಷೇರುಗಳು

ನವದೆಹಲಿ :

   ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಜುಲೈ 23 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2024-25ರ ಪೂರ್ಣ ಪ್ರಮಾಣದ ಬಜೆಟ್  ಮಂಡಿಸಿದರು. ಈ ಮೂಲಕ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೂ ಭಾಜನರಾದರು.ಈ ಬಜೆಟ್‌ನಲ್ಲಿ ಕೆಲವು ವಲಯಗಳಿಗೆ ಭರ್ಜರಿ ಕೊಡುಗೆ ಸಿಕ್ಕರೆ, ಒಂದಷ್ಟು ವಲಯಗಳು ಸ್ವಲ್ಪ ನಿರಾಸೆ ಅನುಭವಿಸಿವೆ.

   ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರು, ತಮ್ಮ ಬಜೆಟ್‌ ಭಾಷಣದಲ್ಲಿ ದೇಶದಲ್ಲಿ ವಿದ್ಯುತ್ ಚಾಲಿತ ವಾಹನ ಗಳ ಬಳಕೆ ಉತ್ತೇಜಿಸುವ ಯಾವುದೇ ಯೋಜನೆಯನ್ನು ಘೋಷಣೆ ಮಾಡಲಿಲ್ಲ. ಈ ಹಿನ್ನೆಲೆ, ಷೇರುಪೇಟೆಯಲ್ಲಿ ಪ್ರಮುಖ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಷೇರುಗಳು ಶೇಕಡ 3% ವರೆಗೆ ಕುಸಿತ ಕಂಡವು.

    ಎನ್‌ಎಸ್‌ಇ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ – NSE)ಯಲ್ಲಿ ಮಧ್ಯಾಹ್ನ 12:30ರ ವೇಳೆಗೆ ಟಾಟಾ ಮೋಟಾರ್ಸ್  ಷೇರುಗಳು ಶೇಕಡ 3% ಕುಸಿತಕಂಡು ರೂ.975ರಲ್ಲಿ ವಹಿವಾಟಾಗುತ್ತಿದೆ. ಹಾಗೆಯೇ ಮಹೀಂದ್ರಾ  ಷೇರುಗಳು ಶೇಕಡ 2% ಇಳಿಕೆಯಾಗಿದ್ದು, ರೂ.2,763ರಲ್ಲಿ ವಹಿವಾಟು ನಡೆಯುತ್ತಿದೆ.

   ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಚಾಲಿತ ವಾಹನೋದ್ಯಮವು ಗಮನಾರ್ಹವಾಗಿ ಬೆಳವಣಿಗೆಯಾಗುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರದ ಬೆಂಬಲ ನಿರ್ಣಾಯಕವಾಗಿದೆ ಎಂದು ಉದ್ಯಮ ಸಂಸ್ಥೆಗಳು ಬಲವಾಗಿ ಪ್ರತಿಪಾದಿಸಿದ್ದವು. ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ವಾಹನಗಳಿಗೂ ಭಾರೀ ಕೊಡುಗೆ ನೀಡಬಹುದು ಎಂಬ ನಿರೀಕ್ಷೆಗಳು ಇದ್ದವು. ಆದಾಗ್ಯೂ ಅದು ನೆರವೇರಲಿಲ್ಲ.

     ಇದರಿಂದ ಹೈಬ್ರಿಡ್ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ  ಷೇರುಗಳು ಶೇಕಡ 2% ಕುಸಿತವಾಗಿದ್ದು, ರೂ.12,400ರಲ್ಲಿ ವಹಿವಾಟು ನಡೆಯುತ್ತಿದೆ. ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯದ ಸಮಸ್ಯೆಯಿಂದ ಹೈಬ್ರಿಡ್  ವಾಹನಗಳು ಪರ್ಯಾಯವಾಗಲಿವೆ ಎನ್ನಲಾಗಿದ್ದು, ಹೈಬ್ರಿಡ್ ವಾಹನಗಳಿಗೆ ಪ್ರಸ್ತುತ ಶೇಕಡ 28% ಜಿಎಸ್‌ಟಿ ವಿಧಿಸಲಾಗುತ್ತಿದೆ. ಅದನ್ನು ಕೈಗೆಟುಕುವಂತೆ ಮಾಡಲು ತೆರಿಗೆಯನ್ನು ಕಡಿಮೆ ಮಾಡಬಹುದು ಎಂಬ ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದರು.

    ನರೇಂದ್ರ ಮೋದಿ ಸರ್ಕಾರವು 2030ರ ವೇಳೆಗೆ ಒಟ್ಟು ವಾಹನ ಮಾರಾಟದಲ್ಲಿ ಶೇಕಡ 30% ವಿದ್ಯುತ್ ಚಾಲಿತ ವಾಹನಗಳು ಇರಬೇಕೆಂದು ಬಯಸಿದ್ದು, ಹೈಬ್ರಿಡ್ – ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟ ಬೆಂಬಲಿಸಲು ಫಾಸ್ಟರ್ ಅಡಾಪ್ಷನ್ & ಮ್ಯಾನುಫ್ಯಾಕ್ಚರಿಂಗ್  ಯೋಜನೆಯನ್ನು ಮೂರನೇ ಹಂತದಲ್ಲಿ ಜಾರಿಗೊಳಿಸಲು ಹೆಚ್ಚಿನ ಅನುದಾನ ಮೀಸಲಿರಿಸಬಹುದು ಎಂಬುದರ ಕುರಿತಂತೆ ಚರ್ಚೆಗಳು ಕೂಡ ನಡೆದಿದ್ದವು. ಸದ್ಯ ಆ ಬಗ್ಗೆಯೂ ಯಾವುದೇ ಔಪಚಾರಿಕ ಘೋಷಣೆಗಳನ್ನು ಮಾಡಲಾಗಿಲ್ಲ.

    ಈ ಕುರಿತಂತೆ ಕೆಲವೇ ದಿನಗಳ ಹಿಂದೆ, ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್‌.ಡಿ ಕುಮಾರಸ್ವಾಮಿ  ಅವರು, ಹಸಿರು ಚಲನಶೀಲತೆ ಉತ್ತೇಜಿಸುವ ಸಲುವಾಗಿ ಫೇಮ್-3 (ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್) ಯೋಜನೆಯನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು. ಆದರೆ, ಈ ಬಜೆಟ್‌ನಲ್ಲಿ ಅಲ್ಲ ಎಂದು ತಿಳಿಸಿದ್ದರು.

   ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ 91% (90,996 ಯುನಿಟ್) ಅಧಿಕಗೊಂಡಿದೆ. ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮಾರಾಟವು ಮೂರು ಪಟ್ಟು ಹೆಚ್ಚಳವಾಗಿದೆ.