ತಿರುವನಂತಪುರಂ:
ವಯನಾಡು ಭೂಕುಸಿತದ ಬಗ್ಗೆ ಎಚ್ಚರಿಕೆ ನೀಡಿದರೂ ಕೇರಳ ಕ್ರಮ ಕೈಗೊಂಡಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಭೂಕುಸಿತದ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಬಂದಿರಲಿಲ್ಲ. ಅಮಿತ್ ಶಾ ಹೇಳಿರುವುದು ಸುಳ್ಳಾಗಿದೆ. ಈ ಸಂಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಬದಲು ದುರಂತಕ್ಕೀಡಾದ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಇದು ಒಬ್ಬರನ್ನೊಬ್ಬರು ದೂಷಿಸುವ ಸಮಯವಲ್ಲ.
ದುರಂತ ಪೀಡಿತ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 115 ರಿಂದ 204 ಮಿ.ಮೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಮೊದಲ 24 ಗಂಟೆಗಳಲ್ಲಿ 200 ಮಿ.ಮೀ ಮತ್ತು ನಂತರದ 24 ಗಂಟೆಗಳಲ್ಲಿ 372 ಮಿ.ಮೀ ಮಳೆಯಾಗಿದೆ. ಇದು ಎಚ್ಚರಿಕೆಗಿಂತ ಹೆಚ್ಚು. ದುರಂತಕ್ಕೂ ಮುನ್ನ ಒಮ್ಮೆಯೂ ರೆಡ್ ಅಲರ್ಟ್ ನೀಡಿರಲಿಲ್ಲ. ಅಪಘಾತದ ಬಳಿಕ ಬೆಳಗ್ಗೆ 6 ಗಂಟೆಗೆ ರೆಡ್ ಅಲರ್ಟ್ ನೀಡಲಾಗಿತ್ತು. 23ರಿಂದ 28ರವರೆಗೆ ವಯನಾಡಿನಲ್ಲಿ ಆರೆಂಜ್ ಅಲರ್ಟ್ ಕೂಡ ನೀಡಿಲ್ಲ. ವಯನಾಡಿನಲ್ಲಿ ಭಾರತೀಯ ಭೂಗರ್ಭ ಇಲಾಖೆ ಸ್ಥಾಪಿಸಿರುವ ಕೇಂದ್ರದಿಂದ ನವೆಂಬರ್ 29ರಂದು ನೀಡಿರುವ ಎಚ್ಚರಿಕೆ ಗ್ರೀನ್ ಅಲರ್ಟ್ ಆಗಿದೆ.
ಇದು ಸಣ್ಣ ಭೂಕುಸಿತ ಮತ್ತು ಭೂಕುಸಿತದ ಎಚ್ಚರಿಕೆಯಾಗಿದೆ. ಅಷ್ಟರಲ್ಲಾಗಲೇ ಧಾರಾಕಾರ ಮಳೆ ಸುರಿದು ಅನಾಹುತ ಸಂಭವಿಸಿದೆ. ಕೇಂದ್ರ ಜಲ ಆಯೋಗವು ಜುಲೈ 23-29 ರ ಅವಧಿಯಲ್ಲಿ ಇರುವಂಜಿಪುಳ ಅಥವಾ ಚಾಲಿಯಾರ್‌ನಲ್ಲಿ ಪ್ರವಾಹದ ಎಚ್ಚರಿಕೆಯನ್ನು ನೀಡಲಿಲ್ಲ. ಇವೆಲ್ಲ ಸತ್ಯವಾಗಿರುವಾಗ ಅಮಿತ್ ಶಾ ಹೇಗೆ ಸಂಸತ್ತಿನಲ್ಲಿ ಅಸತ್ಯವಾದ ಮಾತುಗಳನ್ನು ಹೇಳಿದರು ಎಂದು ವಿಜಯನ್ ಪ್ರಶ್ನಿಸಿದ್ದಾರೆ.