ಜೈಪುರ : ನೆಲಮಾಳಿಗೆಗೆ ನುಗ್ಗಿದ ನೀರು : 3 ಸಾವು….!

ಜೈಪುರ:

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋಚಿಂಗ್ ಸೆಂಟರ್ ಒಂದರ ನೆಲ ಮಾಳಿಗೆಗೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ್ದರು. ಇದೀಗ ಜೈಪುರದಲ್ಲಿ ಇಂತಹುದೇ ಘಟನೆ ನಡೆದಿದೆ.ಗುರುವಾರ ಮುಂಜಾನೆ ನಗರದ ವಿಶ್ವಕರ್ಮ ಪ್ರದೇಶದಲ್ಲಿ ಮಳೆ ನೀರು ಮನೆಯ ನೆಲಮಾಳಿಗೆಗೆ ನುಗ್ಗಿದ ಪರಿಣಾಮ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಹಲವು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮಳೆ ನೀರು ಮನೆಯ ನೆಲಮಾಳಿಗೆಗೆ ನುಗ್ಗಿದ ನಂತರ ಕುಟುಂಬ ಸದಸ್ಯರು ತಮ್ಮ ವಸ್ತುಗಳನ್ನು ತೆಗೆಯಲು ಪ್ರಾರಂಭಿಸಿದ್ದಾರೆ. ಆ ಸಂದರ್ಭದಲ್ಲಿ ನೆಲಮಾಳಿಗೆಯಲ್ಲಿ ನೀರು ತುಂಬಿದ್ದರಿಂದ ಎರಡು ಕುಟುಂಬಗಳ ಮೂವರು ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೂರ್ವ ವಲಯದ ಡಿಸಿಪಿ ಅಮಿತ್ ಕುಮಾರ್ ತಿಳಿಸಿದ್ದಾರೆ.  

    ಎನ್ ಡಿಆರ್ ಎಫ್ ತಂಡ ಮೂವರ ಮೃತದೇಹಗಳನ್ನು ಹೊರಗೆ ತೆಗೆದ ನಂತರ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ. ಮೂವರ ಪೈಕಿ ಒಬ್ಬರು ಬೇರೊಂದು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮನೆಯ ನೆಲಮಾಳಿಗೆಯ ಮಾರ್ಗವು ಕಿರಿದಾದ ಮತ್ತು ಆಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಪ್ರದೇಶದಲ್ಲಿ ಇದೇ ರೀತಿಯ ಮನೆಗಳ ನಿವಾಸಿಗಳು ಮಳೆಗಾಲದ ಸಮಯದಲ್ಲಿ ತಮ್ಮ ನೆಲಮಾಳಿಗೆಯಲ್ಲಿ ಇರದಂತೆ ಸೂಚಿಸಲಾಗಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕನ್ವಟಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link