ಮೈಸೂರು:
ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದ ನಾಲ್ಕು ದಿನಗಳ ನಂತರ ದುರಂತದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ 9 ಜನರ ಪೈಕಿ 8 ಶವ ಪತ್ತೆ ಆಗಿದೆ. ಸುಮಾರು 60 ವರ್ಷಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದ ಮಾದೇವಿ ಎಂಬುವವರ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಸವಿತಾ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದ್ದಾರೆ.
ಮೈಸೂರು ಮೂಲದ ಗುರುಮಲ್ಲನ್(60), ಸಾವಿತ್ರಿ(54), ಶಿವಣ್ಣ(50), ಅಪ್ಪಣ್ಣ(39), ಅಶ್ವಿನಿ(13), ಜೀತು(11), ದಿವ್ಯಾ(35), ಶ್ರೇಯಾ(19) ಎಂಬುವರ ಮೃತದೇಹ ಪತ್ತೆ ಆಗಿದೆ. ಮೃತರ ಸಾವಿನ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಖಚಿತ ಪಡಿಸಿದ್ದಾರೆ, ಮಹಾದೇವಿ ಅವರ ಮೂವರು ಪುತ್ರರು ಕಳೆದ ನಾಲ್ಕು ದಶಕಗಳಿಂದ ಮೆಪ್ಪಾಡಿಯಲ್ಲಿ ನೆಲೆಸಿದ್ದರು. ಅಕ್ಕಪಕ್ಕದಲ್ಲಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಂಡಿದ್ದರು ಗುಡ್ಡ ಕುಸಿತದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮಹಾದೇವಿ ಗುರುತಿಸಿದ್ದಾರೆ.
ಮೊಮ್ಮಗಳು ಶ್ರೇಯಾ (19) ಮೃತದೇಹ ಬುಧವಾರ ಪತ್ತೆಯಾಗಿದ್ದು, ಅಂತ್ಯಸಂಸ್ಕಾರ ನಡೆಸಲಾಗಿದೆ. ಮೃತದೇಹಗಳನ್ನು ಶವಾಗಾರಕ್ಕೆ ತಂದಾಗ ಮಹಾದೇವಿ ಮತ್ತು ಆಕೆಯ ಸಂಬಂಧಿಕರು ಅಸ್ವಸ್ಥರಾಗಿದ್ದರು. ಎಲ್ಲಾ ದೇಹಗಳನ್ನು ಒಟ್ಟಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಮೂರು ತಿಂಗಳ ಮಗುವಾಗಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದ ಮಹೇಶ್ (19) ಅವರನ್ನು ಮುಂಡಕ್ಕೈ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪುಟ್ಟಸೆದ್ದಿ ಮತ್ತು ರಂಗಸ್ವಾಮಿ ದತ್ತು ಪಡೆದಿದ್ದರು. ಅವರು ತಮ್ಮ ದತ್ತು ಪೋಷಕರೊಂದಿಗೆ ಸಾವನ್ನಪ್ಪಿದ್ದಾರೆ. ಅವರ ದೇಹವೂ ಶುಕ್ರವಾರ ಪತ್ತೆಯಾಗಿದೆ. ತಳವಾಡದ ಕಾಮಯ್ಯನಾಪುರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಬದುಕುಳಿದವರಿಗೆ ಚಿಕಿತ್ಸೆ ನೀಡುತ್ತಿರುವ ಗುಂಡ್ಲುಪೇಟೆ, ಮೈಸೂರು ಮತ್ತು ಇತರ ಸ್ಥಳಗಳ ವೈದ್ಯರ ತಂಡದ ಭಾಗವಾಗಿರುವ ಡಾ.ಅಲೀಂ ಪಾಷಾ, ಬೃಹತ್ ದುರಂತದಿಂದ ಬದುಕುಳಿದವರು ಮತ್ತು ಅವರ ಸಂಬಂಧಿಕರಿಗೆ ಸಾಂತ್ವನ ಹೇಳುವುದು ಕಷ್ಟಕರವಾಗಿದೆ. ಅವರ ಕುಟುಂಬ ಸದಸ್ಯರು ಪತ್ತೆಯಾಗಿದ್ದಾರೆಯೇ ಎಂದು ತಿಳಿಯಲು ಸಂಬಂಧಿಕರ ಪ್ರಶ್ನೆಗಳಿಗೆ ಉತ್ತರಿಸಲು ವೈದ್ಯರು ಮತ್ತು ದಾದಿಯರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಕರ್ನಾಟಕ ಮತ್ತು ಕೇರಳದ ಇತರ ಜಿಲ್ಲೆಗಳಿಂದ ಪರಿಹಾರ ಸಾಮಗ್ರಿಗಳು ಹರಿದುಬರುತ್ತಿದ್ದು, ಸ್ವಯಂಸೇವಕರು ತರಕಾರಿಗಳು ಅಥವಾ ಇತರ ಯಾವುದೇ ಹಾಳಾಗುವ ವಸ್ತುಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ. ತರಕಾರಿ ವ್ಯಾಪಾರಿಗಳು ಮೈಸೂರು ಮತ್ತು ಗುಂಡ್ಲುಪೇಟೆ ಮಾರುಕಟ್ಟೆಗಳಿಂದ ವಿವಿಧ ರೀತಿಯ ತರಕಾರಿಗಳನ್ನು ಟ್ರಕ್‌ಗಳಲ್ಲಿ ಲೋಡ್ ಮಾಡಿ ಪರಿಹಾರ ಶಿಬಿರಗಳಿಗೆ ಕಳುಹಿಸುತ್ತಿದ್ದಾರೆ.
ಬಟ್ಟೆ, ಕುಡಿಯುವ ನೀರು, ತಿಂಡಿ ಮತ್ತು ಇತರ ಅಗತ್ಯ ವಸ್ತುಗಳ ಸಾಕಷ್ಟು ಸರಬರಾಜು ಇದೆ ಎಂದು ಸ್ವಯಂಸೇವಕರು ಹೇಳಿದ್ದಾರೆ. ಮೆಪ್ಪಾಡಿ ಸಿಎಚ್‌ಸಿಗೆ 20,000 ಕ್ಲೋರಿನ್ ಮಾತ್ರೆಗಳನ್ನು ತಕ್ಷಣ ಪೂರೈಸುವಂತೆ ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಯುವಕರು ರಕ್ತದಾನ ಮಾಡಲು ಮತ್ತು ಸ್ವಯಂಸೇವಕರಾಗಿ ಕೆಲಸ ಮಾಡಲು ಸಾಲುಗಟ್ಟಿ ನಿಂತಿದ್ದಾರೆ.