ನವದೆಹಲಿ:
ಕರ್ನಾಟಕದಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿಯುತ್ತಿರುವ ನೀರಿನ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೃಪ್ತಿ ವ್ಯಕ್ತಪಡಿಸಿದೆ. ಆದರೆ, ನೀರಿನ ಕೊರತೆ ಎದುರಿಸುತ್ತಿರುವ ಪುದುಚೇರಿಗೆ ನೀರು ಬಿಡುಗಡೆ ಮಾಡುವಂತೆ ತಮಿಳುನಾಡಿಗೆ ಸೂಚಿಸಿದೆ.
ರಾಷ್ಟ್ರರಾಜಧಾನಿಯಲ್ಲಿ ನಡೆದ CWRC 101 ನೇ ಸಭೆಯಲ್ಲಿ ಕರ್ನಾಟಕ ಜೂನ್ 1 ಮತ್ತು ಆಗಸ್ಟ್ 11 ರ ನಡುವೆ ಜಲಮಾಪನ ಕೇಂದ್ರ ಬಿಳಿಗುಂಡ್ಲುಗೆ 156.2 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ ಎಂದು ನಿರ್ಣಯಿಸಿದೆ.ಇದು ಇಡೀ ಮಾನ್ಸೂನ್ಗೆ ಅಗತ್ಯಕ್ಕಿಂತ ಹೆಚ್ಚಿನದಾಗಿದೆ. ಕರ್ನಾಟಕ ಜೂನ್ ಮತ್ತು ಜುಲೈನಲ್ಲಿ 98.8 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿದೆ ಮತ್ತು ಆಗಸ್ಟ್ 1 ರಿಂದ 11 ರ ನಡುವೆ ಇನ್ನೂ 55 ಟಿಎಂಸಿ ನೀರು ಹರಿದಿದೆ.
ಕಾವೇರಿ ಜಲವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯೂಡಿಟಿ) ಪ್ರಕಾರ, ಸುಪ್ರೀಂ ಕೋರ್ಟ್ ತೀರ್ಪಿನಂತೆ ಕರ್ನಾಟಕ ಜೂನ್ ನಿಂದ ಆಗಸ್ಟ್ ವರೆಗೂ 87 ಟಿಎಂಸಿ ನೀರು ಬಿಡಬೇಕಾಗಿದೆ. ಇಲ್ಲಿಯವರೆಗೂ 156.2 ಟಿಸಿಎಂ ನೀರನ್ನು ಹರಿಸಲಾಗಿದೆ.ಇದು ಜೂನ್-ಸೆಪ್ಟೆಂಬರ್ ನಡುವೆ ಹರಿಸಬೇಕಾಗಿದ್ದ 123 ಟಿಸಿಎಂ ಗುರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕರ್ನಾಟಕ ಪ್ರತಿದಿನ ಬಿಳಿಗುಂಡ್ಲು ಕಡೆಗೆ 1.5 ಟಿಎಂಸಿ ಬದಲಿಗೆ ಸುಮಾರು 4.58 ಟಿಎಂಸಿ ಅಡಿ ನೀರನ್ನು ಹರಿಸುತ್ತಿದೆ ಎಂದು CWRC ಅಧ್ಯಕ್ಷ ವಿನೀತ್ ಗುಪ್ತಾ ಹೇಳಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ 7-8 ದಿನಗಳವರೆಗೆ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜಲಾನಯನ ಪ್ರದೇಶದಲ್ಲಿ ಜುಲೈ 14 ರಿಂದ ನಿರಂತರ ಮಳೆಯಾಗುತ್ತಿದ್ದು, ಇದು ಪ್ರದೇಶದ ನೀರಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಗುಪ್ತಾ ತಿಳಿಸಿದರು.
ಆದಾಗ್ಯೂ, ತಮಿಳುನಾಡಿನ ಮೆಟ್ಟೂರು ಅಣೆಕಟ್ಟು ಕರ್ನಾಟಕದಿಂದ ನೀರಿನ ಹರಿವಿನಿಂದ ತುಂಬಿದ್ದರೆ, ಪುದುಚೇರಿ ಇನ್ನೂ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಪುದುಚೇರಿಯ ಕಾರೈಕಲ್ ಜಲಾಶಯಗಳಲ್ಲಿ 0.43 ಟಿಎಂಸಿ ನೀರಿನ ಕೊರತೆಯಿದ್ದು, ಮೆಟ್ಟೂರಿನಿಂದ ಕಾರೈಕಲ್ ಜಲಾಶಯಕ್ಕೆ ನೀರು ಬಿಡುವಂತೆ ತಮಿಳುನಾಡಿಗೆ ಸೂಚಿಸಿದ್ದೇವೆ .ಮೆಟ್ಟೂರಿನಿಂದ ಪುದುಚೇರಿಗೆ ನೀರು ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಗುಪ್ತಾ ಹೇಳಿದರು.
ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿಯನ್ನು ಮರುಪರಿಶೀಲಿಸಲು ಸಿಡಬ್ಲ್ಯೂಆರ್ಸಿಯ ಮುಂದಿನ ಸಭೆಯನ್ನು ಆಗಸ್ಟ್ 30 ರಂದು ನಿಗದಿಪಡಿಸಲಾಗಿದೆ.