ಕಲಬುರಗಿ
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ನಡುವೆ ಮತ್ತೊಂದು ಸುತ್ತಿನ ಮಾತಿನ ಯುದ್ಧ ಶುರುವಾಗಿದೆ. ಆದರೆ ಈ ಬಾರಿ ತಾರಕ್ಕೇರುವ ಲಕ್ಷಣ ಕಾಣಿಸಿದೆ. ಸಿದ್ದಲಿಂಗ ಶ್ರೀಗಳ ಶಾಖಾ ಮಠದ ವಿಚಾರವಾಗಿ ಈ ವಾಕ್ಸಮರ ಆರಂಭವಾಗಿದೆ. ಈ ಮಠದ ಕಟ್ಟಡ ಪರವಾನಗಿ ಪಡೆಯುವಾಗ ಸ್ವಾಮೀಜಿ ಎರಡು ಅಂತಸ್ತಿನ ಕಟ್ಟಡ ಎಂದು ಉಲ್ಲೇಖಿಸಿದ್ದರು. ಆದರೆ ಮೂರು ಅಂತಸ್ತಿನ ಕಟ್ಟಡ ಕಟ್ಟಿಸಲಾಗುತ್ತಿದೆ ಎನ್ನಲಾಗಿದೆ.
ಹೀಗಾಗಿ, ನೀವು ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಿದ್ದೀರಿ ಎಂದಿರುವ ಕಲಬುರಗಿ ಮಹಾನಗರ ಪಾಲಿಕೆ, ಪರವಾನಗಿ ಯಾಕೆ ರದ್ದು ಮಾಡಬಾರದು ಎಂದು ನೋಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಅದರಲ್ಲಿ ತಪ್ಪೇನಿದೆ? ನಾವೇ ನೋಟಿಸ್ ನೀಡಿದ್ದೇವೆ ಎಂದಿದ್ದಾರೆ.
ಸಚಿವರು ಈ ರೀತಿ ಹೇಳಿಕೆ ನೀಡಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ ಸ್ವಾಮೀಜಿ ಸದ್ಯ ಸಚಿವರ ವಿರುದ್ಧ ಸಮರ ಸಾರಿದ್ದಾರೆ. ನನ್ನ ಕಟ್ಟಡ ನಿರ್ಮಾಣ ನಿಯಮ ಬಾಹಿರ ಎನ್ನುವುದಾದರೆ ಕಲಬುಗಿ ನಗರದಲ್ಲಿ ಅದೆಷ್ಟು ಕಟ್ಟಡಗಳಿವೆ? ಅವೆಲ್ಲಾ ನಿಯಮ ಪಾಲಿಸಿವೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಿಮ್ಮದೇ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ ಕೂಡಾ ಪಾಲಿಕೆ ನಿಯಮ ಪಾಲಿಸಿಲ್ಲ. ಮೊದಲು ಅದನ್ನ ನೆಲಸಮ ಮಾಡಿ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸ್ವಾಮೀಜಿ, ‘ನಿಮ್ಮ ಒಡೆತನದ ಪೀಪಲ್ ಏಕಜುಕೇಷನ್ ಸೊಸೈಟಿಯ ದಾಖಲೆಗಳೇ ಪಾಲಿಕೆ ಬಳಿ ಇಲ್ಲ. ಇದಕ್ಕೆಲ್ಲ ಉತ್ತರ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲು ನಿಮ್ಮ ನಿಯಮ ಬಾಹಿರ ಕಟ್ಟಡ ನೆಲಸಮ ಮಾಡಿ ಎಂದು ಸವಾಲು ಹಾಕಿದ್ದಾರೆ.
ಸಚಿವರು ಹಾಗೂ ಸ್ವಾಮೀಜಿ ಮಧ್ಯೆ ಮತ್ತೊಂದು ಸುತ್ತಿನ ಮಾತಿನ ಸಮರ ನಡೆಯುತ್ತಿದೆ. ಏನೇ ಇದ್ದರೂ ಕಾನೂನು ಎಲ್ಲರಿಗೂ ಅನ್ವಯವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
