ರಿಂಗ್‌ ರೋಡ್‌ ಡಾಂಬರೀಕರಣ : ಕೃಷ್ಣಭೈರೇಗೌಡ ಸ್ಪಷ್ಟನೆ

ಬೆಂಗಳೂರು

      ರಿಂಗ್ ರೋಡಿನ ಸರ್ವಿಸ್ ರಸ್ತೆಯ ಡಾಂಬರೀಕರಣಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಮನವಿ ಮಾಡಿದ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರಸ್ತೆ ದುರಸ್ತಿ ಕುರಿತು ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕರ ಪರವಾಗಿ ಅಧಿಕಾರಿಗಳಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದೇನೆ. ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಸಾರ್ವಜನಿಕರ ಪರ ಕೆಲಸ ಮಾಡಬೇಕು ಎಂದರು.

    ಅಧಿಕಾರಿಗಳಿಗೆ ಮಾಹಿತಿ ಕೊಡುವುದಕ್ಕೆ ನಾನಾ ರೀತಿಗಳಿವೆ. ಫೋನ್ ಮಾಡಬಹುದು, ಮೇಸೆಜ್ ಕೊಡಬಹುದು ಹಾಗೂ ಪತ್ರ ಬರೆಯಬಹುದು. ನಾವು ಈಗ ಅವರ ಗಮನಕ್ಕೆ ತಂದಿದ್ದೇನೆ. ಕ್ಷೇತ್ರದ ಸಮಸ್ಯೆ ಕುರಿತು ಅವರ ಗಮನಕ್ಕೆ ತಂದಿದ್ದೇನೆ. ಆದರೆ, ಈ ವಿಚಾರಕ್ಕೆ ಯಾರ್ಯಾರೋ ಏನೇನೋ ಬಣ್ಣ ಕೊಟ್ಟರೆ ಅವರಿಗೆ ಬಿಟ್ಟಿದ್ದು. ಜನರ ಕೆಲಸ ಸರ್ಕಾರದಲ್ಲಿ ಆಗಬೇಕು, ಅದಕ್ಕೆ ಹಾಗೆ ಮಾಡಿದ್ದೇನೆ ಎಂದರು.

    ನಿಮಗೆ ಅ ಕೆಲಸ ಆಗಬೇಕಾ? ಅಥವಾ ಚರ್ಚೆ ಆಗಬೇಕಾ? ಜನರ ಸಮಸ್ಯೆ ಪರಿಹಾರ ಆಗಬೇಕು ಅಷ್ಟೆ. ಯಾವ ಮಾರ್ಗದಲ್ಲಿ ಆಗುತ್ತೆ ಎಂಬುದು ಮುಖ್ಯವಲ್ಲ. ಕೇವಲ ಕೆಲಸ ಆಗಬೇಕು, ಜನರ ಸಮಸ್ಯೆ ಬಗೆ ಹರಿಯಬೇಕು. ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು. 

   ರಸ್ತೆ ಸಮಸ್ಯೆ ಪರಿಹರಿಸುವಂತೆ ಕೋರಿ ಸಚಿವರೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ನಾನಾ ರೀತಿಯ ಚರ್ಚೆಗಳಿಗೆ ಗ್ರಾಸವಾಗಿತ್ತು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೆ ಕಾಂಗ್ರೆಸ್ ನಾಯಕರು, ಸಚಿವರು ಹೀಗೆ ಮಾಡುತ್ತಿದ್ದಾರೆ ಎಂದೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕೃಷ್ಣಭೈರೇಗೌಡ ಸ್ಪಷ್ಟನೆ ನೀಡಿದ್ದಾರೆ.

Recent Articles

spot_img

Related Stories

Share via
Copy link