ಉಡುಪಿ
ಯುವತಿಗೆ ಮಾದಕ ಪದಾರ್ಥ ನೀಡಿ, ಅತ್ಯಾಚಾರವೆಸಿದ್ದ ಆರೋಪಿಗಳನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವತಿ ತಾಯಿಯ ದೂರು ಆಧರಿಸಿ ಮೂವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಮುಖ ಆರೋಪಿ ಅಲ್ತಾಫ್ ಸೇರಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಯುವತಿ ಜೇನು ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಯುವತಿಗೆ ಅಲ್ತಾಫ್ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದಾನೆ. ಶುಕ್ರವಾರ ಮುಂಚಾನೆ ಅಲ್ತಾಫ್ ಯುವತಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ, ಯುವತಿಗೆ ಮಾದಕ ವಸ್ತು ನೀಡಿ, ಸಂಜೆಯವರೆಗೆ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂಜೆಯಾಗುತ್ತಲೇ ಯುವತಿಯನ್ನ ವಾಪಸ್ ಆಕೆಯ ಮನೆಗೆ ಕರೆ ತಂದಿದ್ದಾನೆ. ಈ ವೇಳೆ ಹಿಂದೂ ಕಾರ್ಯಕರ್ತರು ಕಾರು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದ ಯುವತಿ ನಶೆಯಲ್ಲಿರುವುದನ್ನು ಕಂಡ ಪೋಷಕರು ಮತ್ತು ಹಿಂದೂ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ತಾಫ್ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಮಾಹಿತಿ ದೊರೆತಿದೆ. ಯುವತಿ ತಾಯಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಅಲ್ತಾಫ್ ವಿರುದ್ಧ ಅತ್ಯಾಚರ ಮತ್ತು ಅಪಹರಣ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಮಾತನಾಡಿ, ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ ಎಂಬ ದೂರು ಬಂದಿದೆ. ಸಂತ್ರಸ್ತೆಗೆ ಆರೋಪಿ ಕಳೆದ ಮೂರು ತಿಂಗಳಿಂದ ಪರಿಚಯವಿದೆ. ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಯವಾಗಿದ್ದಾರೆ. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದನು. ಆತ ಹೇಳಿದ ಜಾಗಕ್ಕೆ ಸಂತ್ರಸ್ತೆ ಹೋದಾಗ, ಅಲ್ಲಿಂದ ಅಪಹರಿಸಲಾಗಿದೆ ಎಂದು ತಿಳಿಸಿದರು.
ದಾರಿ ಮಧ್ಯಲ್ಲಿ ಏನನ್ನೊ ಬೆರೆಸಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಆರೋಪಿ ಅಲ್ತಾಫ್ನನ್ನು ಬಂಧಿಸಲಾಗಿದೆ. ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರ ಪೈಕಿ ಸುಬೇರ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನ ಸೀಜ್ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಪ್ರಕರಣದ ಕುರಿತಾಗಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಅನ್ಯಕೋಮಿನ ಯುವಕ ಹಿಂದೂ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಲವ್ ಜಿಹಾದ್ನಂತಹ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು. ಯುವತಿಯರು ಇಂತಹ ಘಟನೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಹಿಂದೂ ಯುವತಿಯರು ಆಸೆ, ಆಮಿಷಗಳಿಗೆ ಒಳಗಾಗಬಾರದು. ಇಂತಹ ಕೃತ್ಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ವಿಫಲವಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.