ಬೆಂಗಳೂರು
ಕರ್ನಾಟಕವು ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸುವ ವಿಚಾರವಾಗಿ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳಿವೆ. ಮೇಕೆದಾಟು ಯೋಜನೆಯನ್ನು ಪರಿಶೀಲಿಸುವಂತೆ ಕೋರಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಮತ್ತೆ ಅರ್ಜಿ ಸಲ್ಲಿಸಿದೆ.
ಕಾವೇರಿ ನೀರಾವರಿ ನಿಗಮ ನಿಯಮಿತದ (ನೀರಾವರಿ ದಕ್ಷಿಣ ವಲಯ) ಮುಖ್ಯ ಎಂಜಿನಿಯರ್ ಮೇ 30 ರಂದು ಸಚಿವಾಲಯದ ರಿವರ್ ವ್ಯಾಲಿ ಆ್ಯಂಡ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಸ್ಟ್ ಕಾರ್ಯದರ್ಶುಗೆ ನಮೂನೆ-1, ಕರಡು ವಿಸ್ತೃತ ಯೋಜನಾ ವರದಿಯ ಸಹಿತ ಅರ್ಜಿ ಸಲ್ಲಿಸಿರುವುದು ಲಭ್ಯವಿರುವ ದಾಖಲೆಗಳಿಂದ ತಿಳಿದುಬಂದಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸಚಿವಾಲಯವು ಜುಲೈ 2 ರಂದು ಅಗತ್ಯ ವಿವರಗಳನ್ನು ಕೇಳಿತ್ತು. ಡಿಪಿಆರ್ ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಅನುಮೋದಿಸಿದೆಯೇ? ನ್ಯಾಯಾಲಯದ ಪ್ರಕರಣಗಳ ವಿವರಗಳು ಮತ್ತು ಅಂತರರಾಜ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಕ್ಲಿಯರೆನ್ಸ್ ಸಲ್ಲಿಸುವಂತೆ ಸೂಚಿಸಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ಜುಲೈ 9 ರಂದು ಪ್ರತಿಕ್ರಿಯೆಯನ್ನು ಕಳುಹಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಯೋಜನೆಯ ವಿವಿಧ ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಪರಿಶೀಲನೆಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಕೆದಾಟು ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಹಿಂದಿರುಗಿಸಿದೆ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿತ್ತು.
ಮೇಕೆದಾಟು ಯೋಜನೆಯ ಅನುಷ್ಠಾನವನ್ನು ಪರಿಶೀಲಿಸುಂತೆ ಕೋರಿ ಕರ್ನಾಟಕ ಸರ್ಕಾರವು 2019 ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಪರಿಸರ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿಯು ತಿರಸ್ಕರಿಸಿತ್ತು. ತಮಿಳುನಾಡು ಸರ್ಕಾರದೊಂದಿಗೆ ಸೌಹಾರ್ದಯುತ ಪರಿಹಾರವನ್ನು ಪಡೆಯಬೇಕು ಎಂದು ಸೂಚಿಸಿತ್ತು.
ಕಳೆದ ವರ್ಷ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರು ನೀರಿನ ಸಮಸ್ಯೆಗಳನ್ನು ಉಲ್ಲೇಖಿಸಿ ಮೇಕೆದಾಟು ಜಲಾಶಯ ನಿರ್ಮಾಣ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದರು. ಆದರೆ, ತಮಿಳುನಾಡು ಸಿಎಂ ಸ್ಟಾಲಿನ್ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದರು. ಮೇಕೆದಾಟು ಯೋಜನೆಯು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮತ್ತು 400 MW ಜಲವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ.