ಹೇಮಾ ಸಮಿತಿ ವರದಿಇ ಬಿಡುಗಡೆ : ನಟಿ ರೇವತಿ ಹೇಳಿದ್ದಾದರೂ ಏನು ಗೊತ್ತಾ…?

ತಿರುವನಂತಪುರಂ: 

      ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ನಟಿ ರೇವತಿ ಸಂಪತ್​, ತಾನು ಎದುರಿಸಿದ ಕರಾಳ ಘಟನೆಯನ್ನು ಬಹಿರಂಗಪಡಿಸಿದ್ದು, ಕಿರುಕುಳ ನೀಡಿದ ನಟನ ಹೆಸರನ್ನು ನೇರವಾಗೇ ಬಹಿರಂಗಪಡಿಸಿದ್ದಾರೆ.

    ಖ್ಯಾತ ನಟ ರಿಯಾಜ್​ ಖಾನ್​ ವಿರುದ್ಧ ರೇವತಿ ಗಂಭೀರ ಆರೋಪ ಮಾಡಿದ್ದಾರೆ. ಕೇರಳದ ಸ್ಥಳೀಯ ಮಾಧ್ಯಮವೊಂದರ ಜತೆ ಮಾತನಾಡಿರುವ ರೇವತಿ, ಮಧ್ಯರಾತ್ರಿ ನಟ ರಿಯಾಜ್​ ಖಾನ್​ರಿಂದ ನನಗೆ ಫೋನ್ ಕರೆ ಬಂದಿತ್ತು. ಛಾಯಾಗ್ರಾಹಕರೊಬ್ಬರು ನನ್ನ ಒಪ್ಪಿಗೆಯಿಲ್ಲದೆ ನನ್ನ ಫೋನ್ ನಂಬರ್​ ಅನ್ನು ರಿಯಾಜ್​ ಜತೆ ಹಂಚಿಕೊಂಡಿದ್ದರು. ಅವರು ನನ್ನ ಫೋಟೋಗಳನ್ನು ನೋಡಿ, ನನ್ನ ನಂಬರ್ ತೆಗೆದುಕೊಂಡು ನನಗೆ ಕರೆ ಮಾಡಿದರು.

    ನನಗೆ ಫೋನ್​ ಮಾಡಿದ ರಿಯಾಜ್​, ತನ್ನ ಲೈಂಗಿಕತೆ ಮತ್ತು ಲೈಂಗಿಕ ಆಸಕ್ತಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನನ್ನೊಂದಿಗೆ ಮಲಗಲು ಆಸಕ್ತಿ ಇದೆಯೇ ಎಂದು ಕೇಳಿದರು. ಇಷ್ಟೇ ಅಲ್ಲದೆ, ನಿನ್ನ ನೆಚ್ಚಿನ ಲೈಂಗಿಕ ಭಂಗಿ ಯಾವುದು ಎಂದು ಕೇಳಿದರು. ನನಗೆ ಆಗ ಕೇವಲ 20 ವರ್ಷ. ಇದರಿಂದ ನಾನು ತುಂಬಾ ಆಘಾತಕ್ಕೊಳಗಾದೆ. ಫೋನ್ ಕರೆಯಲ್ಲಿ ನಾನು ಒಂದು ಪದವನ್ನು ಮಾತನಾಡಲು ಸಾಧ್ಯವಾಗಲಿಲ್ಲ. ನನಗೆ ಯಾವುದೇ ಆಸಕ್ತಿಯಿಲ್ಲ ಎಂಬುದನ್ನು ಅರ್ಥಮಾಡಿಕೊಂಡ ನಂತರ, ಮುಂದಿನ ಒಂಬತ್ತು ದಿನಗಳವರೆಗೆ ನಾನು ಕೊಚ್ಚಿಯಲ್ಲಿ ಇರುತ್ತೇನೆ ಮತ್ತು ನನಗಾಗಿ ಕೆಲವು ಮಹಿಳೆಯರನ್ನು ವ್ಯವಸ್ಥೆ ಮಾಡಬಹುದೇ ಎಂದು ನನ್ನನ್ನು ಕೇಳಿದರು ಎಂದು ರೇವತಿ ಸಂಪತ್​ ಆರೋಪ ಮಾಡಿದ್ದಾರೆ.

   ಇದಕ್ಕೂ ಮುನ್ನ ರೇವತಿ ಅವರು ಮಲಯಾಳಂ ನಟ ಸಿದ್ದಿಕ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪ ಮಾಡಿದ್ದಾರೆ. ಈ ಆರೋಪ ಬಂದ ಬೆನ್ನಲ್ಲೇ ಸಿದ್ದಿಕ್ ಅವರು ಆಗಸ್ಟ್ 25 ರಂದು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಸಿದ್ದಿಕ್​, ನಾನು ನನ್ನ ಅಧಿಕೃತ ರಾಜೀನಾಮೆಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ನೀಡಿದ್ದೇನೆ. ನನ್ನ ವಿರುದ್ಧ ಆರೋಪಗಳಿರುವುದರಿಂದ, ನಾನು ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

    ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

   ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು.

Recent Articles

spot_img

Related Stories

Share via
Copy link
Powered by Social Snap