ಜೋಧ್ಪುರ:
ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವನ್ನು 7 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ವೈದ್ಯಕೀಯ ಕಾರಣಕ್ಕೆ ರಾಜಸ್ತಾನ ಹೈಕೋರ್ಟ್ ಅಸಾರಾಂ ಬಾಪುಗೆ ನಿನ್ನೆ 7 ದಿನಗಳ ಪೆರೋಲ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 11 ವರ್ಷಗಳ ನಂತರ ನಿನ್ನೆ ಆಸಾರಾಂ ಬಾಪುವನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಅಸಾರಾಂ ಬಾಪುವಿಗೆ ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿರುವ ಖೊಪೊಲಿ ಪ್ರದೇಶದ ಮಾಧವ್ಬಾಗ್ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ನಿನ್ನೆ ಜೈಲಿನಿಂದ ಬಿಡುಗಡೆಗೊಂಡ ಅಸಾರಾಂ ಬಾಪು ವಿಮಾನದಲ್ಲಿ ಮುಂಬೈಗೆ ಹೋಗಿದ್ದು, ಈ ವೇಳೆ ಬಾಪು ಜೊತೆ ಪೊಲೀಸ್ ಅಧಿಕಾರಿಯೊಬ್ಬರು ಕೂಡ ತೆರಳಿದ್ದಾರೆ. ಆದರೆ ಜೊತೆಗ ಬಂದ ಪೊಲೀಸ್ ಅಧಿಕಾರಿ ಮೇಲೆ ಬಾಪು ಅಸಮಾಧಾನಗೊಂಡಿದ್ದು, ಆ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆ ಆಗಿವೆ. ಅಲ್ಲದೇ ಇದು ಅಸಾರಾಂ ಬಾಪುವಿಗೆ ನೀಡಿದ ಪೆರೋಲ್ನಿಂದ ಪೊಲೀಸರು ಕಳವಳ ಪಡುವಂತೆ ಮಾಡಿದೆ.
16 ವರ್ಷದ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 2013ರಿಂದಲೂ ಅಸಾರಾಮ್ ಬಾಪು ಜೈಲಿನಲ್ಲಿದ್ದಾನೆ. 2018ರಲ್ಲಿ ಆತನ ವಿರುದ್ದದ ಆರೋಪ ಸಾಬೀತಾಗಿದ್ದು, ಜೀವಾವಧಿ ಶಿಕ್ಷೆಯಾಗಿದ್ದು, ಜೋಧ್ಪುರ ಜೈಲಿನಲ್ಲಿ ಆತನನ್ನು ಇರಿಸಲಾಗಿತ್ತು. ಆದರೆ ನಿನ್ನೆ ರಾಜಸ್ಥಾನ ಹೈಕೋರ್ಟ್ ಪೆರೋಲ್ ನೀಡಿದ ಹಿನ್ನೆಲೆಯಲ್ಲಿ ಈತ ಜೋಧ್ಪುರದಿಂದ ಮುಂಬೈಗೆ ವಿಮಾನದಲ್ಲಿ ಬಂದಿದ್ದಾನೆ. ಈ ವೇಳೆ ಈತನ ಜೊತೆ ಪೊಲೀಸ್ ಅಧಿಕಾರಿಯು ಇದ್ದು, ಅಧಿಕಾರಿ ಮೇಲೆ ಬಾಪು ಕೋಪಗೊಂಡಿದ್ದು ವೀಡಿಯೋದಲ್ಲಿ ಸೆರೆ ಆಗಿದೆ. ಹೃದಯ ಸಂಬಂಧಿ ಸಮಸ್ಯೆಯ ಕಾರಣಕ್ಕೆ ಅಸಾರಾಂ ಬಾಪುವಿಗೆ ಚಿಕಿತ್ಸೆಗಾಗಿ ಈ ಪೆರೋಲ್ ನೀಡಲಾಗಿದೆ.
ಪೆರೋಲ್ ನೀಡುವ ವೇಳೆ ಕೋರ್ಟ್ ಶಿಸ್ತುಬದ್ಧವಾದ ನಿಯಮಗಳನ್ನು ಹೇರಿದ್ದು, ಚಿಕಿತ್ಸೆ ವೇಳೆ ಅಸಾರಾಂ ಬಾಪು ಯಾರನ್ನು ಸಂಪರ್ಕಿಸುವಂತಿಲ್ಲ, ಭೇಟಿಯಾಗುವಂತಿಲ್ಲ, ಕೇವಲ ವೈದ್ಯರು ಹಾಗೂ ಆತನ ಸಹಾಯಕರು ಮಾತ್ರ ಆತನ ಜೊತೆಗಿರಬೇಕು ಎಂದು ನ್ಯಾಯಾಲಯ ಹೇಳಿದೆ. ಖಾಸಗಿ ಕೋಣೆಯೊಂದರಲ್ಲಿ ಅಸಾರಾಂ ಬಾಪುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕೋಣೆಗೆ ದಿನದ 24 ಗಂಟೆಯೂ ಪೊಲೀಸರ ಕಣ್ಗಾವಲಿದೆ. 50 ಸಾವಿರ ರೂಪಾಯಿ ಶ್ಯೂರಿಟಿ ಪಡೆದು ಪೆರೋಲ್ ನೀಡಲಾಗಿದ್ದು, ಈ ಚಿಕಿತ್ಸೆಯ ವೆಚ್ಚವನ್ನು ಸಂಪೂರ್ಣವಾಗಿ ಅಸಾರಾಂ ಬಾಪುವೇ ಬರಿಸಬೇಕು ಎಂದು ಕೋರ್ಟ್ ಹೇಳಿದೆ.