ಹುಬ್ಬಳ್ಳಿ:
ಚುನಾವಣಾ ಬಾಂಡ್ ವಿಚಾರದಲ್ಲಿ ಕಾಂಗ್ರೆಸ್ ಅತ್ಯಂತ ಬಾಲಿಶತನ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಚುನಾವಣಾ ಬಾಂಡ್ ಮೂಲಕ ಬಂದಿರುವುದು ವೈಟ್ ಮನಿ. ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರಿಂಕೋರ್ಟ್ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಕಾಂಗ್ರೆಸ್ನ ಆರೋಪ ಸರಿಯಲ್ಲ. ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ 1600 ಕೋಟಿ ರೂ. ಪಡೆದಿಲ್ಲವೇ? ತೃಣಮೂಲ ಕಾಂಗ್ರೆಸ್ಗೆ ಲಾಭವಾಗಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ದೊಡ್ಡ ಪಕ್ಷ. ಅದಕ್ಕೆ ಹೆಚ್ಚು ಹಣ ಹೋಗುತ್ತದೆ ಎಂಬ ಅಸೂಯೆ ಕಾಂಗ್ರೆಸ್ಸಿನದ್ದಾಗಿದೆ. ಆದರೆ, ಚುನಾವಣಾ ಬಾಂಡ್ ಮೂಲಕ ಪಡೆದಿರುವುದು ವೈಟ್ ಮನಿ ಆಗಿದೆಯೇ ಹೊರತು ಅಕ್ರಮ ಹಣವನ್ನಲ್ಲ ಎಂದು ಸ್ಪಷ್ಟಪಡಿಸಿದರು. ಕೋವಿಡ್ ಸಮಯಲ್ಲಿ ಆದ ಭ್ರಷ್ಟಾಚಾರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಬೇಕಾಗಿತ್ತು. ಈಗ ಏಕಾಏಕಿ ಜಾನ್ ಮೈಕಲ್ ಕುನ್ಹಾ ಅವರಿಂದ ತರಾತುರಿಯಲ್ಲಿ ವರದಿ ತರಿಸಿಕೊಳ್ಳಲಾಗಿದೆ. ಏನು ಬಿಚ್ಚಿಡುತ್ತಾರೆ ಬಿಚ್ಚಿಡಲಿ, ಯಾರು ಬೇಡಾ ಎನ್ನುತ್ತಾರೆ? ಪರಸ್ಪರ ಬಿಚ್ಚಿಡುವ ಬೆದರಿಕೆಯಿಂದ ಬಿಜೆಪಿ ಬಾಯಿ ಬಂದ್ ಮಾಡಲು ಆಗದು ಎಂದು ತಿಳಿಸಿದರು.
ರಾಜಕೀಯ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಬೆದರಿಕೆ ತಂತ್ರದಿಂದ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಮೂಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ತಲುಪುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಬಿಜೆಪಿ ಹಗರಣ ಬಿಚ್ಚಿಡುತ್ತೇವೆ ಎಂಬ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಜನಪ್ರಿಯತೆ ಒಂದೇ ವರ್ಷದಲ್ಲಿ ಕುಂದಿದೆ. ಯಾರು ಜನಪ್ರಿಯರು ಎಂಬುದು ಲೋಕಸಭೆ ಚುನಾವಣೆಯಲ್ಲಿ ಜನರು ತೋರಿಸಿದ್ದಾರೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಇದೇ ವೇಳೆ ಆಗ್ರಹಿಸಿದರು.