ಬೆಂಗಳೂರು:
ಮುಡಾ ಹಗರಣವನ್ನು ಸಿದ್ದರಾಮಯ್ಯ ತಲೆಗೆಕಟ್ಟಿ ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕು ಬಹುದೊಡ್ಡ ಖೆಡ್ಡಾ ಹೂಡಿದ್ದಾರೆ.
ಮುಡಾ ಪ್ರಕರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಹಲವು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರ ಭ್ರಷ್ಟಾಚಾರದ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿ, ಕಾನೂನು ಕುಣಿಕೆಗೆ ಸಿಲುಕಿಸಲು ಸಿದ್ದರಾಮಯ್ಯ ಅವರು ಸಜ್ಜಾಗಿದ್ದು, ಭ್ರಷ್ಟಾಚಾರ ಆರೋಪ ಹೊತ್ತ ಬಿಜೆಪಿ ನಾಯಕರ ವಿರುದ್ಧದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಅಕ್ರಮಗಳು ಕುರಿತು ತನಿಖೆ ನಡೆಸಲು ಐವರು ಸಚಿವರ ಸಮಿತಿ ರಚಿಸಿದ್ದಾರೆ.
ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಅಕ್ರಮಗಳು ಸೇರಿ ಒಟ್ಟು 26 ಹಗರಣಗಳ ಕುರಿತು ತನಿಖೆ ನಡೆಸಲು ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ಇದ್ದಾರೆಂದು ತಿಳಿದುಬಂದಿದೆ. ಎರಡು ತಿಂಗಳ ಒಳಗೆ ಈ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಸೂಚಿಸಿದ್ದಾರೆ ಎಂದು ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಯ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ರಮವಹಿಸಲು ಸಮಿತಿಗೆ ಆದೇಶಿಸಲಾಗಿದೆ. ಈ ಸಮಿತಿಯು ಮುಂದಿನ ಎರಡು ತಿಂಗಳುಗಳ ಒಳಗೆ ತನಗೆ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.