ಕೊಪ್ಪಳ
ಇತ್ತೀಚೆಗೆ ಅನೇಕ ಕಲಬೆರಕ ವಸ್ತುಗಳು, ಆಹಾರ ಪದಾರ್ಥಗಳನ್ನು ಹೆಚ್ಚಿನ ವ್ಯಾಪರಸ್ಥರು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಕಡೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳು ಅನೇಕ ಅಂಗಡಿಗಳು, ಬೇಕರಿ, ಹೋಟೆಲ್ಗಳಿಗೆ ಪ್ರತಿನಿತ್ಯ ಭೇಟಿ ನೀಡಿ ಪರಿಶೀಲನೆ ನಡೆಸೋದು, ಗುಣಮಟ್ಟವನ್ನು ಪರೀಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಕಾನೂನು ಪಾಲನೇ ಮಾಡದೇ ಇರೋರಿಗೆ ದಂಡ ಹಾಕುತ್ತಿದ್ದಾರೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಂಡು ವ್ಯಕ್ತಿಯೋರ್ವ, ತಾನು ಫುಡ್ ಸೇಫ್ಟಿ ಆಫೀಸರ್ ಅಲ್ಲದೇ ಇದ್ದರು ಕೂಡ, ರಾಜ್ಯದ ಅನೇಕ ಕಡೆ ತಾನು ಫುಡ್ ಸೇಫ್ಟಿ ಆಫೀಸರ್ ಅಂತ ಹೇಳಿಕೊಂಡು ಅಡ್ಡಾಡಿ ಇದೀಗ ಕೊಪ್ಪಳದಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಆ ನಕಲಿ ಫುಡ್ ಸೇಫ್ಟಿ ಆಫೀಸರ್ ಹೆಸರು ವಿಜಯಕುಮಾರ್. ಮೂಲತಃ ಆಂದ್ರಪ್ರದೇಶ ಅದೋನಿಯನವಾಗಿರೋ ವಿಜಯಕುಮಾರ್ ರಾಯಚೂರು ಜಿಲ್ಲೆಯಲ್ಲಿ ವಾಸವಾಗಿದ್ದ. ಕಳೆದ ಕೆಲ ದಿನಗಳಿಂದ ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನೇಕ ವ್ಯಾಪರಸ್ಥರಿಗೆ ತೊಂದರೆ ಕೊಟ್ಟಿದ್ದ. ಆದರೆ ಇಂದು ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಿರಾಣಿ ಅಂಗಡಿಗೆ ಬಂದಿದ್ದ ಈತ ತಗ್ಲಾಕ್ಕಿಕೊಂಡಿದ್ದಾನೆ.
ಹೌದು ಖನ್ನಾರಾಮ್ ಪಟೇಲ್ ಅನ್ನೋರ ಅಂಗಡಿಗೆ ಬಂದಿದ್ದ. ತಾನು ಹುಬ್ಬಳ್ಳಿಯಿಂದ ಬಂದಿದ್ದೇನೆ. ಫುಡ್ ಸೇಫ್ಟಿ ಆಫೀಸರ್ ಇದ್ದೇನೆ. ನಿಮ್ಮಲ್ಲಿರುವ ಆಹಾರ ಪದಾರ್ಥಗಳನ್ನು ತೋರಿಸಿ ಅಂತ ಹೇಳಿದ್ದ. ಆದರೆ ಆತನ ಬಗ್ಗೆ ಅನುಮಾನಗೊಂಡಿದ್ದ ವ್ಯಾಪಾರಿ, ಕೊಪ್ಪಳ ಜಿಲ್ಲೆಯ ಫುಡ್ ಸೇಫ್ಟಿ ಆಫೀಸರ್ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಸಿದ್ದ ಕೊಪ್ಪಳ ಜಿಲ್ಲಾ ಫುಡ್ ಸೇಫ್ಟಿ ಆಫೀಸರ್ ಕೃಷ್ಣಾ ರಾಠೋಡ್, ಐನಾತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಕಲಿ ಫುಡ್ ಸೇಫ್ಟಿ ಆಫೀಸರ್ ವಿಜಯಕುಮಾರ್ನನ್ನು ಕೊಪ್ಪಳ ನಗರ ಠಾಣೆಯ ಪೊಲೀಸರು ಹಿಡಿದುಕೊಂಡು ಹೋಗಿ, ಕಂಬಿ ಹಿಂದೆ ಹಾಕಿದ್ದಾರೆ. ಇನ್ನು ವಿಜಯಕುಮಾರ್ಗೆ ಇದೆಲ್ಲಾ ಹೊಸದಲ್ಲವಂತೆ. ಈ ಹಿಂದೆ ಯಾದಗಿರ ಜಿಲ್ಲೆಯಲ್ಲಿ ಕೂಡ ಇದೇ ರೀತಿ ಅನೇಕರಿಗೆ ಹೆದರಿಸಿ ಹಣ ವಸೂಲಿ ಮಾಡಲು ಹೋದಾಗ ಸಿಕ್ಕಿ ಬಿದ್ದಿದ್ದನಂತೆ. ಇದೀಗ ಮತ್ತೆ ಕೊಪ್ಪಳ ನಗರದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಹೋಗುತ್ತಿದ್ದ ವಿಜಯಕುಮಾರ್, ತಾನು ಬೆಂಗಳೂರು, ಹುಬ್ಬಳಿಯಿಂದ ಬಂದಿದ್ದೇನೆ. ಫುಡ್ ಸೇಫ್ಟಿ ಆಫೀಸರ್ ಅಂತ ಹೇಳಿ ವ್ಯಾಪರಸ್ಥರಿಗೆ ತೊಂದರೆ ಕೊಡುತ್ತಿದ್ದ.
ಇಂದು ಸಿಕ್ಕಿಬಿದ್ದ ನಂತರ, ಅಮಾಯಕನಂತೆ ನಟಿಸುತ್ತಿರುವ ವಿಜಯಕುಮಾರ್, ತಾನು ಸೋಷಿಯಲ್ ವರ್ಕರ್ ಇದ್ದೇನೆ. ಎನ್ಜಿಓ ನಡೆಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದೇನೆ ಅಂತ ಮತ್ತೊಂದು ಹೊಸ ಡ್ರಾಮಾ ಆರಂಭ ಮಾಡಿದ್ದ. ಆದರೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.ಸದ್ಯ ಕೊಪ್ಪಳ ನಗರ ಠಾಣೆಯ ಪೊಲೀಸರು ವಿಜಯಕುಮಾರ್ ನನ್ನು ಬಂಧಿಸಿದ್ದಾರೆ. ಆದರೆ ಈತ ವಂಚಿಸೋದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಹೀಗಾಗಿ ಆತನನ್ನು ಕಂಬಿ ಹಿಂದೆ ಕಳುಹಿಸಿ, ಆತನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ.