ತೆಲಂಗಾಣ:
ರಾಷ್ಟ್ರಪ್ರಶಸ್ತಿ ವಿಜೇತ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅನ್ನು ಅತ್ಯಾಚಾರ ಆರೋಪದಲ್ಲಿ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಜಾನಿ ಮಾಸ್ಟರ್ (ಶೇಖ್ ಜಾನಿ ಬಾಷಾ) ವಿರುದ್ಧ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಒಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಮೊದಲಿಗೆ ಆರೋಪ ಸುಳ್ಳೆಂದು ವಾದಿಸಿದ್ದ ಜಾನಿ ಮಾಸ್ಟರ್ ಬಳಿಕ, ಚಿತ್ರರಂಗವು ಅತ್ಯಾಚಾರ ಸಂತ್ರಸ್ತೆ ಪರ ನಿಲವು ತಳೆಯುತ್ತಿದ್ದಂತೆ ತಲೆ ಮರೆಸಿಕೊಂಡಿದ್ದರು. ಇದೀಗ ಸೈಬರಾಬಾದ್ ಪೊಲೀಸರು ಜಾನಿ ಮಾಸ್ಟರ್ ಅನ್ನು ಗೋವಾದ ಹೋಟೆಲ್ ಒಂದರಲ್ಲಿ ಬಂಧಿಸಿದ್ದಾರೆ. ಅಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಸೈಬರಾಬಾದ್ಗೆ ಕರೆ ತರಲಾಗುತ್ತಿದೆ.
ಟ್ರಾನ್ಸಿಟ್ ವಾರೆಂಟ್ ಮೇಲೆ ಜಾನಿ ಮಾಸ್ಟರ್ ಅನ್ನು ಬಂಧಿಸಿ ಕರೆತರಲಾಗುತ್ತಿದ್ದು, ಸೈಬರಾಬಾದ್ಗೆ ಕರೆತಂದ ಬಳಿಕ ಜಾನಿ ಮಾಸ್ಟರ್ ಅನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಸೈಬರಾದಾದ್ ಪೊಲೀಸ್ ಆಯುಕ್ತ ಅವಿನಾಶ್ ಮೊಹಂತಿ ಹೇಳಿರುವಂತೆ. ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗುತ್ತದೆಯಂತೆ. ದೂರದಾರ ಯುವತಿ ಈಗ 21 ವರ್ಷ ವಯಸ್ಸಿನವರಾಗಿದ್ದು, ಅತ್ಯಾಚಾರ ನಡೆದಾಗ ಆಕೆ ಅಪ್ರಾಪ್ತೆಯಾಗಿದ್ದ ಕಾರಣ ಜಾನಿ ಮಾಸ್ಟರ್ ವಿರುದ್ಧ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ನಮೂದಾಗಲಿದೆ.
ಯುವತಿಯೊಬ್ಬಾಕೆ ಇತ್ತೀಚೆಗೆ ಸೈಬರಾಬಾದ್ ಪೊಲೀಸರಿಗೆ ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಯುವತಿ ನೀಡಿರುವ ದೂರಿನ ಅನ್ವಯ, ಜಾನಿ, 2019 ರಲ್ಲಿ ತನ್ನನ್ನು ರಿಯಾಲಿಟಿ ಶೋ ಒಂದರಲ್ಲಿ ನೋಡಿ, ಆಕೆಗೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಅವಕಾಶ ಕೊಡುವುದಾಗಿ ಹೇಳಿದ್ದರಂತೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ನೀಡಿದ ಬಳಿಕ ಯುವತಿಯನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ. ಅಲ್ಲದೆ ನಟಿ ಹೇಳಿರುವಂತೆ ಜಾನಿ ಮಾಸ್ಟರ್ ಹಾಗೂ ಅವರ ಪತ್ನಿ ಇಬ್ಬರೂ ಆಕೆಯ ಮೇಲೆ ಹಲ್ಲೆ ಸಹ ಮಾಡಿದ್ದರಂತೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಸಂತ್ರಸ್ತ ಯುವತಿಗೆ ಚಿತ್ರರಂಗದ ಹಲವು ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಅಲ್ಲು ಅರ್ಜುನ್, ತಮ್ಮ ಎಲ್ಲ ಸಿನಿಮಾಗಳಲ್ಲಿಯೂ ಸಂತ್ರಸ್ತ ಯುವತಿಗೆ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಲವು ಖ್ಯಾತ ನಟ, ನಿರ್ದೇಶಕ, ನಟಿಯರು ಸಂತ್ರಸ್ತೆ ಪರ ನಿಂತಿದ್ದಾರೆ. ಜಾನಿ ಮಾಸ್ಟರ್, ದಕ್ಷಿಣ ಭಾರತದ ಖ್ಯಾತ ಕೊರಿಯೋಗ್ರಾಫರ್, ದಕ್ಷಿಣದ ಎಲ್ಲ ದೊಡ್ಡ ಸ್ಟಾರ್ ನಟರೊಟ್ಟಿಗೆ ಜಾನಿ ಕೆಲಸ ಮಾಡಿದ್ದಾರೆ. ಬಾಲಿವುಡ್ನಲ್ಲಿಯೂ ಸಲ್ಮಾನ್ ಖಾನ್, ಅಕ್ಷಯ್ ಇನ್ನಿತರೆ ಸ್ಟಾರ್ ನಟರೊಟ್ಟಿಗೆ ಜಾನಿ ಕೆಲಸ ಮಾಡಿದ್ದಾರೆ.