ಬೆಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿಗಳ ಹಾವಳಿ ಕುರಿತಂತೆ ಟಿವಿ9 ಅಭಿಯಾನ ಮಾಡಿತ್ತು. ಟಿವಿ9 ಅಭಿಯಾನದ ಬೆನ್ನಲ್ಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಇದೀಗ ಬೀದಿನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಇಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಾಳ್ಕರ್ ವಿಕಾಸ್ ಕಿಶೋರ್ ನೇತೃತ್ವದಲ್ಲಿ ಚಿಪ್ ಅಳವಡಿಕೆ ಚಾಲನೆ ನೀಡಲಾಗಿದೆ.
ನಗರದ ಮಲ್ಲೇಶ್ವರ, ಮತ್ತಿಕೆರೆ ಸುತ್ತಮುತ್ತ ಮೈಕ್ರೋಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಆ ಮೂಲಕ ಬೀದಿನಾಯಿಗಳ ಮೇಲೆ ನಿಗಾ ಇಡಲು ಪಾಲಿಕೆ ಸಜ್ಜಾಗಿದೆ. ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಎಬಿಸಿ ಸೇರಿ ಹಲವು ಮಾಹಿತಿ ಸಂಗ್ರಹಕ್ಕೆ ಚಿಪ್ ಸಹಕಾರಿ ಆಗಲಿದೆ. ಬಿಜ್ ಆರ್ಬಿಟ್ ಸಂಸ್ಥೆ ಜೊತೆ ಸೇರಿ ಚಿಪ್ ಅಳವಡಿಕೆ ಬಿಬಿಎಂಪಿ ಮುಂದಾಗಿದ್ದು, ಪ್ರಯೋಗ ಯಶಸ್ವಿಯಾದರೆ ಎಲ್ಲಾ ವಲಯದ ಶ್ವಾನಗಳಿಗೆ ಅಳವಡಿಕೆಗೆ ಪ್ಲ್ಯಾನ್ ಮಾಡಲಾಗುತ್ತಿದೆ.
ಬೆಂಗಳೂರಿನ ಬೀದಿನಾಯಿಗಳ ಕಾಟದ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡಿತ್ತು. ಬೀದಿನಾಯಿಗಳ ಬಗ್ಗೆ ಸೈಲೆಂಟ್ ಆಗಿದ್ದ ಪಾಲಿಕೆ ಆಯುಕ್ತರಿಗೆ ಒದೊಂದು ದಿನ ಬೀದಿನಾಯಿಗಳ ರೋಷಾವೇಷದ ಪ್ರದರ್ಶನವಾಗಿತ್ತು. ಗುಂಡಿ ಮುಚ್ಚುವ ಕೆಲಸ ಪರಿಶೀಲನೆ ವೇಳೆ ಬೀದಿನಾಯಿಗಳು ಅಟ್ಯಾಕ್ ಮಾಡಿದ್ದವು. ಆ ಘಟನೆ ನಡೆದ ಬಳಿಕ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ರಿಲೀಸ್ ಮಾಡಲಾಗಿತ್ತು.
ಬೀದಿನಾಯಿಗಳ ರೋಷಾವೇಷವನ್ನ ಕಣ್ಣಾರೆ ಕಂಡ ಪಾಲಿಕೆ ಮುಖ್ಯ ಆಯುಕ್ತರು, ಬಿಬಿಎಂಪಿಯ ಪಶುಪಾಲನ ಇಲಾಖೆ ಮೂಲಕ ಬೀದಿನಾಯಿಗಳ ಕಡಿತ ಹಾಗೂ ರೇಬಿಸ್ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟಣೆ ಹೊರಡಿಸಿದ್ದರು.
6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರುವ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿತ್ತು. ಇನ್ನು ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡುವುದನ್ನು ಕೂಡ ಹೆಚ್ಚಿಸಲು ಚಿಂತನೆ ನಡೆಸಿದ್ದು, ಟಿವಿ9 ವರದಿ ಬಳಿಕ ಪಾಲಿಕೆ ಅಲರ್ಟ್ ಆಗಿದೆ.








